

ಕಾರ್ಕಳ,ಆ.18:ಇತ್ತೀಚಿನ ದಿನಗಳಲ್ಲಿ ಬೀದಿ ಬದಿಯ ವ್ಯಾಪಾರ ಉದ್ಯಮ ಗಣನೀಯವಾಗಿ ಬೆಳೆಯುತ್ತಿದ್ದು,ಇದರ ಸಾಲಿಗೆ ಸೋಶಿಯಲ್ ಮೀಡಿಯಾ ಮೂಲಕ ಗಲ್ಲಿಗಲ್ಲಿಗಳಲ್ಲಿ ಹೈಟೆಕ್ ಬೀದಿಬದಿ ವ್ಯಾಪಾರಿಗಳು ಹುಟ್ಟಿಕೊಂಡಿದ್ದಾರೆ. ಬೀದಿಬದಿಯ ಜಂಕ್ ಫುಡ್ ಗಳಿಗೆ ಯುವಕರು,ಮಕ್ಕಳು,ಹಿರಿಯರು ಕೂಡ ಮಾರುಹೋಗುತ್ತಾರೆ. ಆದರೆ ಬಹುತೇಕ ಬೀದಿ ಬದಿಯಲ್ಲಿ ವ್ಯಾಪಾರ ಮಾಡುವವರು ಯಾವುದೇ ಪರವಾನಗಿ ಪಡೆಯದೇ ಜೊತೆಗೆ ಆಹಾರ ಸುರಕ್ಷತೆ, ಗುಣಮಟ್ಟ,ಶುಚಿತ್ವ ಕಾಪಾಡದೇ ಕೇವಲ ಲಾಭದ ಉದ್ದೇಶದಿಂದ ಗ್ರಾಹಕರಿಗೆ ಕಳಪೆ ಆಹಾರ ನೀಡುತ್ತಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬರುತ್ತಿದೆ.
ಸರ್ಕಾರಗಳು ಬೀದಿ ಬದಿ ವ್ಯಾಪಾರಿಗಳಿಗೆ ಕಾನೂನಾತ್ಮಕವಾಗಿ ಅವಕಾಶ ನೀಡಿದ್ದರೂ ಆಹಾರ ಸುರಕ್ಷತೆ, ಗುಣಮಟ್ಟ, ಶುಚಿತ್ವ ಹಾಗೂ ವ್ಯಾಪಾರ ಪರವಾನಗಿ ಸೇರಿದಂತೆ ಎಲ್ಲಾ ನಿಯಮಗಳನ್ನು ಪಾಲಿಸಬೇಕು. ಆದರೆ ಬೀದಿಬದಿ ವ್ಯಾಪಾರಿಗಳು ಯಾವುದೇ ನಿಯಮಗಳನ್ನು ಪಾಲಿಸುತ್ತಿಲ್ಲ, ಇದರಿಂದ ಜನರ ಆರೋಗ್ಯಕ್ಕೂ ಕುತ್ತು ಬರುವುದು ಖಚಿತ. ಇದಕ್ಕೆ ಪೂರಕವಾಗಿ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್,ಇನ್ಸ್ಟಾಗ್ರಾಂ ಮೂಲಕ ಮೊದಲೇ ಗ್ರಾಹಕರನ್ನು ಬುಕ್ ಮಾಡಿ ಬಳಿಕ ನಿಗದಿಪಡಿಸಿದ ಸ್ಥಳಗಳಿಗೆ ಖಾಸಗಿ ಕಾರಿನಲ್ಲಿ ಬಂದು ರಸ್ತೆ ಬದಿ ಕೊಡೆ ಹಾಕಿ ಕೆಲವೇ ಗಂಟೆಗಳಲ್ಲಿ ಸಾವಿರಾರು ರೂಪಾಯಿ ವ್ಯಾಪಾರ ಮಾಡಿ ಹೋಗುತ್ತಾರೆ. ಇಂತಹ ವ್ಯಾಪಾರ ನಡೆಸುವವರಿಗೆ ಯಾವುದೇ ಲೈಸನ್ಸ್ ಬೇಕಿಲ್ಲ, ಯೂಟ್ಯೂಬ್ ನೋಡಿ ಕಲಿತು ಆಹಾರ ತಯಾರಿಸಿ ಬೇಕಾಬಿಟ್ಟಿ ಮಾರಾಟ ಮಾಡಿ ಅದರಿಂದ ಜನರ ಆರೋಗ್ಯಕ್ಕೆ ಹಾನಿಯಾದರೆ ಯಾರು ಹೊಣೆ ಎನ್ನುವ ಪ್ರಶ್ನೆ ಕಾಡುವುದು ಸಹಜ.
ತಿರಮಿಸು ಎನ್ನುವ ಆಹಾರಕ್ಕೆ ಫಿದಾ ಆಗುತ್ತಿದೆ ಯುವ ಜನತೆ: ಇಲ್ಲಿ ಯೂಟ್ಯೂಬರ್’ಗಳೇ ಪಾಕಪ್ರವೀಣರು
ಇತ್ತೀಚೆಗೆ ತಿರಮಿಸು ಎನ್ನುವ ಸಿಹಿ ತಿನಿಸು ಭಾರೀ ಟ್ರೆಂಡಿಂಗ್ ಆಗುತ್ತಿದೆ. ಕಾರ್ಕಳದ ಜೋಡುರಸ್ತೆ, ಆನೆಕೆರೆ ಸೇರಿದಂತೆ ಮುಖ್ಯಪೇಟೆಯ ಸುತ್ತಮುತ್ತ ರಸ್ತೆ ಬದಿಯಲ್ಲೇ ವಿವಿಧ ಆಹಾರ ಪದಾರ್ಥಗಳ ಮಾರಾಟ ನಡೆಯುತ್ತಿದೆ. ಕೆಲವು ಕಡೆ ಮಾಲ್‌ಗಳ ಸಮೀಪವೂ ಇಂತಹ ವ್ಯಾಪಾರ ನಡೆಯುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಲೈಕ್ಸ್ ಹಾಗೂ ಟ್ರೆಂಡಿಂಗಾಗಿ ಇಂತಹ ಮಾರಾಟಕ್ಕೆ ಉತ್ತೇಜನ ಸಿಗುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ. ಇಂತಹ ಆಹಾರ ಮಾರಾಟ ಮಾಡುವವರಿಗೆ ವಾಪಾರ ಪರವಾನಗಿ ಇದೆಯೇ? ಆಹಾರ ತಯಾರಿಸುವ ಸ್ಥಳ ಸ್ವಚ್ಛವಾಗಿದೆಯೇ? ಬಳಸುವ ನೀರು, ಎಣ್ಣೆ ಹಾಗೂ ಕಚ್ಚಾ ವಸ್ತುಗಳ ಗುಣಮಟ್ಟವನ್ನು ಪರೀಕ್ಷಿಸಲಾಗುತ್ತಿದೆಯೇ? ಎಂಬ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಬೇಕಿದೆ.
ಇನ್ನು ಕೆಲವು ಮಾರಾಟಗಾರರು ಆಹಾರದಲ್ಲಿ ಅಜಿನೊಮೋಟೊ ಸೇರಿದಂತೆ ರುಚಿ ಹೆಚ್ಚಿಸುವ ಪದಾರ್ಥಗಳನ್ನು ಅತಿಯಾಗಿ ಬಳಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಇದು ನಿಜವೇ ಅಥವಾ ಕೇವಲ ಆರೋಪವೇ ಎಂಬುದನ್ನು ಅಧಿಕಾರಿಗಳು ಆಹಾರ ಮಾದರಿ ಪರೀಕ್ಷೆಯ ಮೂಲಕ ಬಹಿರಂಗಪಡಿಸಲಿ. ಆರೋಪವನ್ನು ಸತ್ಯವೆಂದು ಬಿಂಬಿಸುವುದಕ್ಕಿAತ ವೈಜ್ಞಾನಿಕ ಪರೀಕ್ಷೆ ನಡೆಸಬೇಕಿದೆ. ಆಹಾರ ಮಾರಾಟಕ್ಕೆ ವಿರೋಧವಿಲ್ಲ. ಆದರೆ ನಿಯಮ ಮೀರಿ ವ್ಯಾಪಾರಕ್ಕೆ ಅವಕಾಶ ನೀಡುವುದಕ್ಕೂ ವಿರೋಧವಿದೆ. ನಗರಸಭೆ, ಆಹಾರ ಸುರಕ್ಷತಾ ಇಲಾಖೆ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ತಕ್ಷಣ ಪರಿಶೀಲನೆ ನಡೆಸಬೇಕು. ಪರವಾನಗಿ ಇಲ್ಲದವರು ಯಾರು, ಆಹಾರ ಸುರಕ್ಷತಾ ನಿಯಮ ಪಾಲಿಸದವರು ಯಾರು, ಸಂಚಾರಕ್ಕೆ ಅಡ್ಡಿಯಾಗುವಂತೆ ವ್ಯಾಪಾರ ಮಾಡುವವರು ಯಾರು ಎಂಬುದನ್ನು ಗುರುತಿಸಿ ಕ್ರಮ ಕೈಗೊಳ್ಳಬೇಕಿದೆ.





.
.
.
.
.
.
.
.
.
.
.
.
.
.
.
.
.
.
.
.
