

ಉಡುಪಿ,ಆ. 22: ಕಾಪು ತಾಲೂಕು ಮುದರಂಗಡಿಯ ಸೈಂಟ್ ಕ್ಷೇವಿಯರ್ ಚರ್ಚ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಪ್ರಿನ್ಸ್ ಎಂಟರ್ಪ್ರೈಸಸ್ ಮಾಲಕ ಡೇವಿಡ್ ಡಿಸೋಜಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ನಟೋರಿಯಸ್ ಗ್ಯಾಂಗ್‌ಸ್ಟರ್ ಅನುಜ್ ಪಾಟೀಲ್ (35) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಆಗಸ್ಟ್ 7ರಂದು ಮಧ್ಯಾಹ್ನ ಸುಮಾರು 3.45ರ ವೇಳೆಗೆ ಮುದರಂಗಡಿಯ ಸೈಂಟ್ ಕ್ಷೇವಿಯರ್ ಚರ್ಚ್ ಕಾಂಪ್ಲೆಕ್ಸ್‌ನಲ್ಲಿ ಡೇವಿಡ್ ಡಿಸೋಜಾ ಅವರನ್ನು ಮೋಟಾರ್ ಸೈಕಲ್‌ನಲ್ಲಿ ಬಂದ ಆರೋಪಿಗಳ ಪೈಕಿ ಸಹಸವಾರನು ಪಿಸ್ತೂಲ್‌ನಿಂದ ತಲೆಗೆ ಗುಂಡು ಹಾರಿಸಿ ಕೊಲೆ ಮಾಡಿದ್ದ. ಈ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿತ್ತು.
ಪ್ರಕರಣದ ಆರೋಪಿಗಳ ಪತ್ತೆ ಮುಂದಾದ ಹಲವರನ್ನು ಬಂಧಿಸಿದ್ದರು.ಇನ್ನೋರ್ವ ಗ್ಯಾಂಗ್ ಸ್ಟರ್ ಅನುಜ್ ಪಾಟೀಲ್ ಎಂಬಾತನ ಮಾಹಿತಿ ಪಡೆದ ಕುಂದಾಪುರ ಪೊಲೀಸ್ ಠಾಣೆಯ ಉಪನಿರೀಕ್ಷಕ ನಂಜ ನಾಯಕ್, ಕೊಲ್ಲೂರು ಪೊಲೀಸ್ ಠಾಣೆಯ ಉಪನಿರೀಕ್ಷಕ ವಿನಯ್ ಹಾಗೂ ಸಿಬ್ಬಂದಿಯ ತಂಡವು ಕಾರ್ಯಾಚರಣೆ ನಡೆಸಿ, ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮೇಶ್ವರ ಎಂಬಲ್ಲಿ ಸೋಮವಾರ ಬೆಳಿಗ್ಗೆ ಸುಮಾರು 6ರಿಂದ 6.30ರ ನಡುವೆ ಡೇವಿಡ್ ಡಿಸೋಜಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಮೂವರು ಶೂಟರ್‌ಗಳನ್ನು ಕಳುಹಿಸಿದ ಆರೋಪದ ಮೇರೆಗೆ ಅನುಜ್ ಪಾಟೀಲ್‌ನನ್ನು ಬಂಧಿಸಿದೆ.
ಬಂಧಿಸಿ ಕರೆತರುವ ವೇಳೆ ಆರೋಪಿ ಕೊಲ್ಲೂರು ಠಾಣೆಯ ಪಿಎಸ್ಐ ವಿನಯ್ ಅವರ ಆಯುಧವನ್ನು ಕಸಿದುಕೊಂಡು ಪೊಲೀಸರತ್ತ ಫೈಯರ್ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕುಂದಾಪುರ ಪೊಲೀಸ್ ಉಪನಿರೀಕ್ಷಕ ನಂಜ ನಾಯಕ್ ಅವರು ಆತ್ಮರಕ್ಷಣೆಗಾಗಿ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ.
ಗುಂಡೇಟಿನಿಂದ ಗಾಯಗೊಂಡ ಅನುಜ್ ಪಾಟೀಲ್‌ನನ್ನು ಚಿಕಿತ್ಸೆಗಾಗಿ ಉಡುಪಿಯ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
2017ರಿಂದ ತಲೆಮರೆಸಿಕೊಂಡಿದ್ದ ಆರೋಪಿ
ಪೊಲೀಸರ ಪ್ರಕಾರ ಅನುಜ್ ಪಾಟೀಲ್ ಮುಂಬೈನಲ್ಲಿ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, 2017ರಿಂದ ತಲೆಮರೆಸಿಕೊಂಡಿದ್ದ. ಈತನ ವಿರುದ್ಧ ಮಹಾರಾಷ್ಟ್ರದಲ್ಲಿ MCOCA ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಆರೋಪಿಯ ವಿರುದ್ಧ ಒಟ್ಟು 11 ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ 10 ಪ್ರಕರಣಗಳು ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದ ಪ್ರಕರಣಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಾರಾಷ್ಟ್ರದಲ್ಲಿ ನಾಲ್ಕು, ಗುಜರಾತ್‌ನಲ್ಲಿ ಐದು, ದಮನ್ ಮತ್ತು ದಿಯುನಲ್ಲಿ ಒಂದು ಹಾಗೂ ಕರ್ನಾಟಕದಲ್ಲಿ ಒಂದು ಪ್ರಕರಣ ದಾಖಲಾಗಿರುವುದಾಗಿ ಮಾಹಿತಿ ನೀಡಲಾಗಿದೆ.
ಡೇವಿಡ್ ಡಿಸೋಜಾ ಕೊಲೆ ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳ ಪತ್ತೆ ಹಾಗೂ ಕೊಲೆಯ ಹಿಂದಿನ ಉದ್ದೇಶ ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ.





.
.
.
.
.
.
.
.
.
.
.
.
.
.
.
.
.
.
.
.
