

ಕಾರ್ಕಳ, ಸೆ.12: ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ ಮುಟ್ಲುಪಾಡಿ ಪಡು ದರ್ಖಾಸು ಬಳಿಯ ಮೀಸಲು ಅರಣ್ಯದಲ್ಲಿ ದುಷ್ಕರ್ಮಿಗಳು ಶುಕ್ರವಾರ ಮುಂಜಾನೆ ಸುಮಾರು 10 ಲಕ್ಷಕ್ಕೂ ಮಿಕ್ಕಿ ಬೆಲೆಬಾಳುವ ಕಿರಾಲು ಬೋಗಿ ಹಾಗೂ ಹೆಬ್ಬಲಸು ಮರಗಳನ್ನು ಕಡಿದು ಸಾಗಾಟಕ್ಕೆ ಯತ್ನಿಸಿದ್ದಾರೆ. ಏಕಾಎಕಿ ಕ್ರೇನ್, ಲಾರಿಗಳು ಹಾಗೂ ಮರ ಕಡಿಯುವ ಯಂತ್ರದೊಂದಿಗೆ ಬಂದ ಮರಗಳ್ಳರು ಬೆಳಗ್ಗಿನಿಂದಲೇ ರಾಜಾರೋಷವಾಗಿ ಸುಮಾರು 10ಕ್ಕೂ ಅಧಿಕ ಬೃಹತ್ ಗಾತ್ರದ ಮರಗಳನ್ನು ಕಡಿದು ಕ್ರೇನ್ ಮೂಲಕ ಲಾರಿಗೆ ತುಂಬಿಸಲು ಮುಂದಾದಾಗ ಸ್ಥಳೀಯರು ಆಕ್ಷೇಪಿಸಿದ್ದಾರೆ. ಆದರೆ ನಾವು ದೈವದ ಗರಡಿಗೆ ಮರ ಕಡಿಯುತ್ತಿರುವುದಾಗಿ ಹೇಳಿದಾಗ ನಿಮ್ಮಲ್ಲಿ ಅನುಮತಿ ಪತ್ರ ಇದೆಯೇ ಎಂದು ಕೇಳಿದಾಗ ಮರಗಳನ್ನು ಬಿಟ್ಟು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಆದರೆ ದುರಂತ ಎಂದರೆ ಅರಣ್ಯ ಸಂಪತ್ತಿನ ಸಾಗಾಟ ತಡೆಗೆ ನಿರ್ಮಿಸಲಾಗಿದ್ದ ಕಳ್ಳ ಬೇಟೆ ತಡೆ ಕೇಂದ್ರದಿಂದ ಕೇವಲ 50 ಮೀಟರ್ ದೂರದಲ್ಲಿ ಮರಗಳನ್ನು ಕಡಿದರೂ ಯಾವ ಅರಣ್ಯ ಸಿಬ್ಬಂದಿಗೂ ಮಾಹಿತಿ ಇರಲಿಲ್ಲ ಎನ್ನುವುದು ಸ್ಥಳೀಯರಲ್ಲಿ ಅನುಮಾನಕ್ಕೆ ಕಾರಣವಾಗಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಸೊಪ್ಪು, ಮರದ ಗೆಲ್ಲು ಕಡಿಯಲು ಕೂಡ ಅನುಮತಿ ಇಲ್ಲ. ಆದರೆ ಈ ಭಾಗದಲ್ಲಿ 10 ಲಕ್ಷಕ್ಕೂ ಅಧಿಕ ಮೌಲ್ಯದ ಮರಗಳನ್ನು ಯಾರ ಭಯವೂ ಇಲ್ಲದೇ ಕಡಿದು ಸಾಗಾಟಕ್ಕೆ ಮುಂದಾಗಿದ್ದಾರೆ ಎಂದರೆ ಇದು ಅರಣ್ಯ ಇಲಾಖೆಯ ಅಧಿಕಾರಿಗಳ ಸಹಕಾರವಿಲ್ಲದೇ ನಡೆಯಲು ಸಾಧ್ಯವಿಲ್ಲ. ಮುಂಜಾನೆಯಿಂದ ಸಂಜೆಯವರೆಗೂ ಮರಗಳನ್ನು ಕಡಿಯುತ್ತಿದ್ದರೂ ಯಾವ ಒಬ್ಬ ಅರಣ್ಯ ಸಿಬ್ಬಂದಿ ಕೂಡ ಘಟನಾ ಸ್ಥಳಕ್ಕೆ ಬಂದಿಲ್ಲ. ಸ್ಥಳೀಯರು ಮರ ಕಡಿದ ವಿಡಿಯೋ ಫೋಟೋ ವೈರಲ್ ಮಾಡಿದ ಹಿನ್ನಲೆಯಲ್ಲಿ ಎಚ್ಚೆತ್ತ ಅರಣ್ಯ ಅಧಿಕಾರಿಗಳು ಸಂಜೆ ವೇಳೆ ಸ್ಥಳಕ್ಕೆ ಧಾವಿಸಿ ಕಡಿದು ಹಾಕಲಾಗಿದ್ದ ಮರಗಳನ್ನು ಸೀಜ್ ಮಾಡಿದ್ದಾರೆ.
ಈ ಪ್ರಕರಣದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳ ವೈಫಲ್ಯ ಅತ್ಯಂತ ಸ್ಪಷ್ಟವಾಗಿದ್ದು, ಪ್ರಭಾವಿಗಳ ಒತ್ತಡಕ್ಕೆ ಮಣಿದು ಈ ಕೃತ್ಯಕ್ಕೆ ಸಾಥ್ ನೀಡಿದ್ದಾರೆಯೇ ಎನ್ನುವ ಸಂದೇಹ ಮೂಡಿದೆ. ಆದ್ದರಿಂದ ಈ ಕೃತ್ಯ ಎಸಗಿದ್ದ ಆರೋಪಿಗಳನ್ನು ಬಂಧಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕಿದೆ.





.
.
.
.
.
.
.
.
.
.
.
.
.
.
.
.
.
.
.
.
