

ಕಾರ್ಕಳ,: ಕಾರ್ಕಳ ತಾಲೂಕಿನ ಪುರಸಭಾ ವ್ಯಾಪ್ತಿಯ ಮನೆ ರಹಿತರಿಗೆ ಸರ್ಕಾರದ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಆಶ್ರಯ ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸುವಲ್ಲಿ ಶಾಸಕ ವಿ. ಸುನಿಲ್ ಕುಮಾರ್ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ವತಿಯಿಂದ ಶನಿವಾರ ಪ್ರತಿಭಟನೆ ನಡೆಯಿತು.
ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ನಗರ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಶೆಟ್ಟಿ ಅವರ ನೇತೃತ್ವದಲ್ಲಿ ಪತ್ತೊಂಜಿಕಟ್ಟೆಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮುನಿಯಾಲು ಉದಯ ಶೆಟ್ಟಿ ಅವರು, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ, ಬೆಂಗಳೂರು ವತಿಯಿಂದ ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ವಸತಿರಹಿತರಿಗೆ ಮನೆ ನಿರ್ಮಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಸದ್ಯ ಸುಮಾರು 250 ಮನೆಗಳು ನಿರ್ಮಾಣ ಹಂತದಲ್ಲಿದ್ದು, ಅರ್ಹ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ಆರೋಪಿಸಿದರು. ಒಂದು ತಿಂಗಳೊಳಗೆ ಅರ್ಹ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಬೇಕು. ಆರು ತಿಂಗಳೊಳಗೆ ಗುತ್ತಿಗೆದಾರರಿಂದ ಕಾಮಗಾರಿ ಪೂರ್ಣಗೊಳಿಸಿ, ಅವರಿಗೆ ಅನುದಾನ ಮಂಜೂರು ಮಾಡುವ ಕೆಲಸ ನಾವು ಮಾಡುತ್ತೇವೆ ಎಂದು ಸವಾಲು ಹಾಕಿದರು.
ಒಂದು ತಿಂಗಳೊಳಗೆ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸದಿದ್ದರೆ, ಶಾಸಕರ ಮನೆ ಹಾಗೂ ಕಚೇರಿ ಎದುರು ಧರಣಿ ನಡೆಸಿ, ನಿಮ್ಮೊಂದಿಗೆ ನಾವೂ ಧರಣಿಯಲ್ಲಿ ಭಾಗವಹಿಸುತ್ತೇವೆ’ ಎಂದು ಫಲಾನುಭವಿಗಳಿಗೆ ಭರವಸೆ ನೀಡಿದರು. ಕಾರ್ಕಳ ಕ್ಷೇತ್ರದಲ್ಲಿ ₹60ಕೋಟಿಗೂ ಅಧಿಕ ಮೊತ್ತದ ಕಾಮಗಾರಿಗಳು ನಡೆದಿವೆ. ಆದರೆ ಶಾಸಕರು ಕ್ಷೇತ್ರಕ್ಕೆ ಶಾಶ್ವತವಾಗಿ ಉಳಿಯುವಂತಹ ಯಾವೊಂದು ಪ್ರಮುಖ ಕೆಲಸ ಮಾಡಿದ್ದಾರೆ ಎಂಬುದನ್ನು ತೋರಿಸಲಿ ಎಂದು ಟೀಕಿಸಿದರು.
ಆಶ್ರಯ ಸಮಿತಿ ಸಭೆಗಳನ್ನು ಕಾಟಾಚಾರಕ್ಕಾಗಿ ನಡೆಸಲಾಗುತ್ತಿದೆ ಎಂಬ ಆರೋಪವನ್ನೂ ಕಾಂಗ್ರೆಸ್ ಮುಖಂಡರು ಮಾಡಿದರು. ಶೀಘ್ರವೇ ಸೂಕ್ತ ಹಾಗೂ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ, ನಿರ್ಮಾಣಗೊಳ್ಳುತ್ತಿರುವ ಮನೆಗಳನ್ನು ಅವರಿಗೆ ಹಸ್ತಾಂತರಿಸಬೇಕು ಎಂದು ಆಗ್ರಹಿಸಿದರು.
ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ್ ರಾವ್, ಮಾಜಿ ಪುರಸಭಾ ಸದಸ್ಯ ಅಶ್ಫಕ್ ಅಹ್ಮದ್, ಪ್ರತಿಭಾ ರಾಣೆ, ಸುಬಿತ್ ಎನ್.ಆರ್. ಮೊದಲಾದವರು ಉಪಸ್ಥಿತರಿದ್ದರು





.
.
.
.
.
.
.
.
.
.
.
.
.
.
.
.
.
.
.
.
