
ಬೆಂಗಳೂರು,ಸೆ .16: ಈ ಬಾರಿ ರಾಜ್ಯದಲ್ಲಿ ಮುಂಗಾರು ಮಳೆಯ ಕೊರತೆಯ ಪರಿಣಾಮವಾಗಿ ಜಲಾಶಯಗಳಲ್ಲಿ ನೀರಿನ ಕೊರತೆಯಿಂದ ಭತ್ತದ ಇಳುವರಿಯ ಪ್ರಮಾಣ ತೀವ್ರ ಕುಸಿತವಾಗಿದೆ. ಇದರಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಅಕ್ಕಿ ದರ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಈಗಾಗಲೇ ಎರಡು ಬಾರಿ ಅಕ್ಕಿ ದರ ಏರಿಕೆಯಾಗಿದ್ದು, ಇಂದಿನಿAದ ಮೂರನೇ ಬಾರಿಗೆ ಅಕ್ಕಿ ದರ ಪರಿಷ್ಕರಣೆಯಾಗಿರುವುದು ಮಧ್ಯಮ ವರ್ಗ ಹಾಗೂ ಬಡ ಕುಟುಂಬಗಳಿಗೆ ಜೀವನ ನಿರ್ವಹಣೆ ದುಸ್ತರವಾಗಿದೆ.
ಹೊಸ ದರ ಪರಿಷ್ಕರಣೆಯಿಂದಾಗಿ ಸಾಮಾನ್ಯ ಬಳಕೆಯ ಸೋನಾ ಮಸೂರಿ ಅಕ್ಕಿಯ ದರ ಪ್ರತಿ ಕೆಜಿಗೆ 5 ರಿಂದ 10 ರಷ್ಟು ಹೆಚ್ಚಳವಾಗಿದ್ದರೆ, ಪ್ರೀಮಿಯಂ ಹಾಗೂ ಉತ್ತಮ ಗುಣಮಟ್ಟದ ಅಕ್ಕಿಯ ಬೆಲೆ ಕೆಜಿಗೆ 10 ರಿಂದ 20 ರಷ್ಟು ಏರಿಕೆಯಾಗಿದೆ. ಕ್ವಿಂಟಾಲ್ ಲೆಕ್ಕದಲ್ಲಿ ಸಗಟು ಮಾರುಕಟ್ಟೆಯಲ್ಲಿ ಸುಮಾರು 1,000 ವರೆಗೆ ದರ ಹೆಚ್ಚಾಗಿದೆ. ಚೀಲಗಳ ಲೆಕ್ಕಾಚಾರದಲ್ಲಿ ನೋಡುವುದಾದರೆ, ಸಾಮಾನ್ಯ ಅಕ್ಕಿಯ ಪ್ರತಿ ಬ್ಯಾಗ್‌ಗೆ 200 ಹಾಗೂ ಉತ್ತಮ ದರ್ಜೆಯ ಅಕ್ಕಿ ಚೀಲಕ್ಕೆ 250 ರಿಂದ 300 ರಷ್ಟು ಹೆಚ್ಚುವರಿ ಹಣ ತೆರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಹೋಲ್‌ಸೇಲ್ ಮಾರುಕಟ್ಟೆಯಲ್ಲಿ ಕೆಜಿಗೆ 10 ರಿಂದ 20 ರಷ್ಟು ಏರಿಕೆಯಾಗಿದ್ದರೆ, ಸ್ಥಳೀಯ ಚಿಲ್ಲರೆ ಅಂಗಡಿಗಳಲ್ಲಿ ಗ್ರಾಹಕರಿಗೆ ತಲುಪುವಷ್ಟರಲ್ಲಿ ಪ್ರತಿ ಕೆಜಿಗೆ 20 ರಿಂದ ಬರೋಬ್ಬರಿ 40 ರಷ್ಟು ಹೊರೆ ಬೀಳಲಿದೆ. ಇಂದಿನಿAದಲೇ ಈ ಪರಿಷ್ಕೃತ ದರಗಳು ಮಾರುಕಟ್ಟೆಯಲ್ಲಿ ಜಾರಿಗೆ ಬಂದಿದ್ದು, ದಿನಸಿ ಖರೀದಿಗೆ ಬಂದ ಗ್ರಾಹಕರು ದರಪಟ್ಟಿಯನ್ನು ನೋಡಿ ಕಂಗಾಲಾಗಿದ್ದಾರೆ.
ರಾಜ್ಯದಲ್ಲಿ ಈ ಬಾರಿ ವಾಡಿಕೆಯಷ್ಟು ಮಳೆಯಾಗದೆ ಭತ್ತದ ಬೆಳೆಗೆ ಭಾರಿ ಹೊಡೆತ ಬಿದ್ದಿರುವುದು ಜೊತೆಗೆ ವಿದೇಶಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿ ರಫ್ತಾಗುತ್ತಿರುವುದು ಕೂಡ ಸ್ಥಳೀಯವಾಗಿ ಪೂರೈಕೆಯಲ್ಲಿ ವ್ಯತ್ಯಯ ತಂದೊಡ್ಡಿದೆ. ಸ್ಥಳೀಯ ಬೇಡಿಕೆಗೆ ತಕ್ಕಂತೆ ಪೂರೈಕೆ ಇಲ್ಲದಿರುವುದು ಬೆಲೆ ಏರಿಕೆಗೆ ತುಪ್ಪ ಸುರಿದಂತಾಗಿದೆ. ಅಕ್ಟೋಬರ್ ತಿಂಗಳಲ್ಲಿ ಅಕ್ಕಿ ಬೆಲೆ ಮತ್ತೊಂದು ಹಂತದಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಸಗಟು ವರ್ತಕರು ಮುನ್ಸೂಚನೆ ನೀಡಿದ್ದಾರೆ. ಹಬ್ಬದ ಸೀಸನ್ ಸಮೀಪಿಸುತ್ತಿರುವ ಹೊತ್ತಲ್ಲೇ ಆಹಾರ ಪದಾರ್ಥಗಳ ಬೆಲೆ ನಿರಂತರವಾಗಿ ಏರುತ್ತಿರುವುದು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.







.
.
.
.
.
.
.
.
.
.
.
.
.
.
.
.
.
.
.
.
