

ಕರಾವಳಿನ್ಯೂಸ್ ಡೆಸ್ಕ್ ವಿಶೇಷ ವರದಿ: ಕೃಷ್ಣ,ಎನ್, ಅಜೆಕಾರ್
ಕರಾವಳಿಯ ಇತಿಹಾಸಲ್ಲಿ ಸೆ.18 ಹೊಸ ಮೈಲಿಗಲ್ಲು ಸೃಷ್ಟಿಸಲಿದೆಯೇ ಎನ್ನುವ ಲೆಕ್ಕಾಚಾರ ಈಗಿನಿಂದಲೇ ಶುರುವಾಗಿದೆ. ಯಾಕೆಂದರೆ ರಾಜಧಾನಿ ಬೆಂಗಳೂರಿನಲ್ಲಿ ಕೇಂದ್ರೀಕೃತವಾಗಿರುವ ಆಡಳಿತ ಯಂತ್ರವನ್ನೇ ಒಂದು ದಿನದ ಮಟ್ಟಿಗೆ ಮಂಗಳೂರಿಗೆ ಸ್ಥಳಾಂತರಿಸುವ ಸಿಎಂ ಡಿಕೆ ಶಿವಕುಮಾರ್ ನಿರ್ಧಾರಕ್ಕೆ ಕರಾವಳಿಗರು ಬಹುಪರಾಕ್ ಎಂದಿದ್ದಾರೆ. ಮಾತ್ರವಲ್ಲದೇ ಈ ಸಂಪುಟ ಸಭೆ ಕೇವಲ ಯೋಜನೆಗಳ ಘೋಷಣೆ ಮಾತ್ರ ಸೀಮಿತವಾಗದೇ ನೂರೆಂಟು ಲೆಕ್ಕಾಚಾರಕ್ಕೂ ವೇದಿಕೆಯಾಗುವ ಸಾಧ್ಯತೆಗಳಿವೆ.
ರಾಜ್ಯ ರಾಜಕೀಯದ ಇತಿಹಾಸಲ್ಲಿ ಮೊಟ್ಟ ಮೊದಲ ಬಾರಿ ಸರ್ಕಾರದ ಸಚಿವ ಸಂಪುಟ ಸಭೆಯು ಕರಾವಳಿಯ ಹೃದಯಭಾಗ ಮಂಗಳೂರಿನಲ್ಲಿ ಸೆ.18ರಂದು ಶುಕ್ರವಾರ ನಡೆಯಲಿದ್ದು, ಕರಾವಳಿಗರಿಗೆ ಇದು ಅತ್ಯಂತ ರೋಮಾಂಚನಕಾರಿ ವಿಷಯವೂ ಆಗಿದೆ. ರಾಜಕೀಯ ತಂತ್ರಗಾರಿಕೆ ವಿಚಾರಲ್ಲಿ ಟ್ರಬಲ್ ಶೂಟರ್ ಆಗಿರುವ ಡಿಕೆ ಶಿವಕುಮಾರ್ ಅವರ ನಡೆಯೇ ಅತ್ಯಂತ ನಿಗೂಢ. ಈ ಬಾರಿ ಕರಾವಳಿ ದಂಡಯಾತ್ರೆಗೆ ಹೊರಟಿರುವುದರ ಹಿಂದೆ ಸಾಕಷ್ಟು ಲೆಕ್ಕಾಚಾರ ಅಡಗಿದೆ. ಕರಾವಳಿಯ ಸಮಗ್ರ ಅಭಿವೃದ್ಧಿಗೆ ಭರಪೂರ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿಯ ಜೊತೆಜೊತೆಗೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಭದ್ರಕೋಟೆಯಲ್ಲಿ ಕಾಂಗ್ರೆಸ್ ಬಾವುಟ ಹಾರಿಸುವ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ತಂತ್ರಗಾರಿಕೆಯೂ ಇದ್ದಂತಿದೆ.
ಕರಾವಳಿಗರ ಜೀವನ ಪದ್ಧತಿ, ಇಲ್ಲಿನ ಕಲೆ ಸಾಹಿತ್ಯ, ಪ್ರವಾಸೋದ್ಯಮ,ಧಾರ್ಮಿಕ ಆಚಾರ ವಿಚಾರಗಳು ರಾಜ್ಯಕ್ಕೆ ಹೋಲಿಸಿದರೆ ಎಲ್ಲವೂ ವಿಭಿನ್ನತೆಯಿಂದ ಕೂಡಿದೆ. ಇದಲ್ಲದೇ ಪ್ರತೀ ಸಲದ ಬಜೆಟ್ ವಿಚಾರ ಪ್ರಸ್ತಾಪವಾದಾಗಲೂ ಕರಾವಳಿ ಅಭಿವೃದ್ಧಿಗೆ ಪ್ರತ್ಯೇಕ ಯೋಜನೆಗಳನ್ನು ರೂಪಿಸಬೇಕು ಎನ್ನುವ ಕೂಗು ಇಂದು ನಿನ್ನೆಯದಲ್ಲ.ಇದರ ಜೊತೆಗೆ ಇನ್ನೊಂದು ಆಯಾಮದಲ್ಲಿ ನೋಡಿದರೆ ಕರಾವಳಿಯು ದಶಕಗಳಿಂದಲೂ ಹಿಂದುತ್ವದ ಭದ್ರಕೋಟೆಯಾಗಿದೆ. ಸುಳ್ಯದಿಂದ ಬೈಂದೂರಿನವರೆಗೂ ಈ ಹಿಂದಿನ ಬಹುತೇಕ ಚುನಾವಣೆಗಳಲ್ಲಿಯೂ ಬಿಜೆಪಿಯೇ ಗೆದ್ದಿದೆ. ಉಳ್ಳಾಲ ಕ್ಷೇತ್ರ ಹೊರತುಪಡಿಸಿದರೆ ಹೆಚ್ಚಿನ ಕ್ಷೇತ್ರಗಳು ಕಾಂಗ್ರೆಸ್ ಪಾಲಿಗೆ ಇಂದಿಗೂ ಕಬ್ಬಿಣದ ಕಡಲೆಯಾಗಿಯೇ ಉಳಿದಿದೆ. ಇದೆಲ್ಲಾ ಅಂಶಗಳನ್ನು ಮುಂದಿಟ್ಟುಕೊAಡು ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಅವರು ಸಂಪುಟ ಸಭೆಯನ್ನು ಮಂಗಳೂರಿನಲ್ಲಿ ನಡೆಸುವ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ ಎಂಬ ವಿಶ್ಲೇಷಣೆಗಳು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿವೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಪ್ರತ್ಯೇಕ ಜಿಲ್ಲೆಗಳಾಗಿ ವಿಂಗಡೆಯಾದರೂ ಇಂದಿಗೂ ಕರಾವಳಿಯ ಈ ಎರಡು ಜಿಲ್ಲೆಗಳ ಜನರ ಜೀವನ ಪದ್ಧತಿ,ಆಚಾರ ವಿಚಾರ,ಭಾವನಾತ್ಮಕ ಸಂಬAಧಗಳು ಇಂದಿಗೂ ಬದಲಾಗಿಲ್ಲ. ಕರಾವಳಿಯ ವಾಣಿಜ್ಯ ಹಾಗೂ ಕೈಗಾರಿಕೆಗಳ ಹೆಬ್ಬಾಗಿಲು ಅನ್ನಿಸಿಕೊಂಡಿರುವ ಮಂಗಳೂರಿನ ಬಂದರು ಪ್ರದೇಶವು ಇಲ್ಲಿನ ಆರ್ಥಿಕ ಜೀವನಾಡಿಯಾಗಿದೆ. ಇದರ ಜೊತೆಗೆ ಇಲ್ಲಿನ ಪ್ರವಾಸೋದ್ಯಮ ಹಾಗೂ ಪ್ರಮುಖ ಧಾರ್ಮಿಕ ಸ್ಥಳಗಳಾದ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಲ, ಕೊಲ್ಲೂರು ಸೇರಿದಂತೆ ಪ್ರಮುಖ ದೇವಾಲಯಗಳಿಗೆ ದೇಶದ ನಾನಾ ಭಾಗಗಳಿಂದ ಭಕ್ತರು ಬರುತ್ತಾರೆ. ಸಾಕಷ್ಟು ವೈವಿದ್ಯತೆಯಿಂದ ಕೂಡಿದ ಕರಾವಳಿಯ ಮೂಲಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡುವ ಜೊತೆಗೆ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ರೂಪಿಸಲು ಡಿಕೆ ಮುಂದಾಗಿದ್ದಾರೆ.
ಸಿಎA ಡಿಕೆ ಶಿವಕುಮಾರ್ ನೇತೃತ್ವದ ಸಂಪುಟ ಸಭೆಯು ಪ್ರತಿಪಕ್ಷ ಬಿಜೆಪಿಗೆ ಹಿಂದುತ್ವದ ಭದ್ರಕೋಟೆ ಛಿದ್ರವಾಗುತ್ತಾ ಎನ್ನುವ ಆತಂಕ ಶುರುವಾದಂತಿದೆ. ಯಾಕೆಂದರೆ ಸಮಾಜವಾದಿ ಹಾಗೂ ಜಾತ್ಯಾತೀತ ಹಿನ್ನಲೆಯ ಸಿದ್ಧರಾಮಯ್ಯನವರನ್ನು ರಾಜಕೀಯವಾಗಿ ಎದುರಿಸುವುದು ಬಿಜೆಪಿಗೆ ಅಷ್ಟೊಂದು ಕಷ್ಟವಲ್ಲ, ಆದರೆ ಹಿಂದುತ್ವದ ಕುರಿತ ಮೃಧು ಧೋರಣೆ, ಧಾರ್ಮಿಕತೆ, ಅಭಿವೃದ್ದಿಯ ದೂರದೃಷ್ಟಿ ಹೊಂದಿರುವ ಡಿಕೆ ಶಿವಕುಮಾರ್ ಅವರನ್ನು ಕಟ್ಟಿಹಾಕುವುದು ಅಷ್ಟು ಸುಲಭವಲ್ಲ ಎನ್ನುವ ವಿಚಾರ ಬಿಜೆಪಿ ನಾಯಕರಿಗೆ ಗೊತ್ತಿದೆ. ಕೇವಲ ಸಚಿವ ಸಂಪುಟ ಸಭೆ ನಡೆಸಿ ಭರಪೂರ ಯೋಜನೆಗಳನ್ನು ಘೋಷಿಸುವ ಜಾಯಮಾನ ಖಂಡಿವಾಗಿಯೂ ಡಿಕೆ ಶಿವಕುಮಾರ್ ಅವರದ್ದಲ್ಲ, ಬದಲಾಗಿ ತಾವು ಪ್ರಕಟಿಸಿದ ಯೋಜನೆಗಳನ್ನು ಕಾರ್ಯಗತಗೊಳಿಸುವ ಹೊಣೆಗಾರಿಕೆಯೂ ಅವರ ಮೇಲಿದೆ. ಯಾಕೆಂದರೆ ಮುಂದಿನ ವಿಧಾನಸಭಾ ಚುನಾವಣೆಗೆ ಇನ್ನು ಕೇವಲ ಒಂದೂವರೆ ವರ್ಷ ಇರುವ ಹಿನ್ನಲೆಯಲ್ಲಿ ಕಾಂಗ್ರೆಸ್ ಸರ್ಕಾರದ ಮುಂದೆ ಸಾಲು ಸಾಲು ಸವಾಲುಗಳಿವೆ.
ಒಂದೆಡೆ ಪಂಚ ಗ್ಯಾರಂಟಿಗಳಿಗೆ ತೊಂದರೆಯಾಗದAತೆ ಅನುದಾನ ಹೊಂದಿಸಬೇಕು, ಅಭಿವೃದ್ಧಿಗೆ ಕಾಮಗಾರಿಗಳಿಗೆ ವೇಗ ನೀಡಬೇಕು,ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು, ಇದರ ಜೊತೆ ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದ್ದು ರೈತರ ಕಷ್ಟಗಳಿಗೆ ಸ್ಪಂದಿಸಬೇಕು. ಈ ಎಲ್ಲಾ ಸವಾಲುಗಳ ನಡುವೆ ಸಚಿವ ಸಂಪುಟ ಸಭೆ ನಡೆಸಿ ಕರಾವಳಿಗೆ ಪ್ರತ್ಯೇಕ ಯೋಜನೆಗಳನ್ನು ರೂಪಿಸಲು ಮುಂದಾಗಿರುವ ಸರ್ಕಾರದ ನಿರ್ಧಾರ ಕರಾವಳಿಗರ ಪಾಲಿಗೆ ಆಶಾದಾಯಕವಾಗಿದೆ. ಆದರೆ ಸಂಪುಟದಲ್ಲಿ ಪ್ರಕಟಿಸಿದ ನಿರ್ಧಾರಗಳು ಎಷ್ಟರ ಮಟ್ಟಿಗೆ ಕಾರ್ಯಗತಗೊಳ್ಳುತ್ತವೆ, ಕರಾವಳಿಯ ಹಿಂದುತ್ವ ಭದ್ರಕೋಟೆ ಛಿದ್ರವಾಗುತ್ತಾ ಎನ್ನುವುದು ಕಾದು ನೋಡಬೇಕಿದೆ.







.
.
.
.
.
.
.
.
.
.
.
.
.
.
.
.
.
.
.
.
