

ಕಾರ್ಕಳ, ಸೆ.16: ಕರಾವಳಿ ಭಾಗದಲ್ಲಿ ನಿರುದ್ಯೋಗ ಸಮಸ್ಯೆ ಗಂಭೀರವಾಗಿದ್ದು, ಯುವಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಯೋಜನೆಗಳಿಗೆ ಸರ್ಕಾರ ಆದ್ಯತೆ ನೀಡಬೇಕು. ಆದರೆ ಬಹುನಿರೀಕ್ಷಿತ ನಿಟ್ಟೆ ಜವಳಿ ಪಾರ್ಕ್ ಯೋಜನೆಗೆ ಶಾಸಕರು ನಿರಾಸಕ್ತಿ ತೋರುತ್ತಿರುವುದು ಖಂಡನೀಯ ಎಂದು ಸಾಮಾಜಿಕ ಕಾರ್ಯಕರ್ತ ನೇಮಿರಾಜ ರೈ ಆರೋಪಿಸಿದ್ದಾರೆ.
ಅವರು ಕಾರ್ಕಳ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಯುತ್ತಿರುವುದು ಸಂತಸದ ವಿಚಾರ. ಸಭೆಯಲ್ಲಿ ಕರಾವಳಿಯ ನಿರುದ್ಯೋಗ ಸಮಸ್ಯೆ ಹಾಗೂ ಉದ್ಯೋಗ ಸೃಷ್ಟಿಯ ಕುರಿತು ಸಭೆಯಲ್ಲಿ ಚರ್ಚೆಯಾಗಬೇಕು ಎಂದು ಒತ್ತಾಯಿಸಿದರು.
ನಿಟ್ಟೆಯ ಜವಳಿ ಪಾರ್ಕ್‌ಗೆ ಮಂಜೂರಾತಿ ದೊರೆತು ಆರು ವರ್ಷ ಕಳೆದಿದ್ದರೂ ಯೋಜನೆ ಇನ್ನೂ ಕಾರ್ಯಗತಗೊಂಡಿಲ್ಲ. ಸರ್ಕಾರದಿಂದ 15 ಎಕರೆ ಜಾಗ ಮಂಜೂರಾಗಿದ್ದು, ರೂ.27.97 ಕೋಟಿ ಅನುದಾನವಿದೆ ಎನ್ನಲಾಗುತ್ತಿದೆ. ಆದರೂ ಕಾಮಗಾರಿ ಆರಂಭವಾಗದಿರುವುದು ಯುವಜನರಲ್ಲಿ ನಿರಾಸೆ ಮೂಡಿಸಿದೆ,ಆದ್ದರಿಂದ ಶಾಸಕರು ಈ ಕುರಿತು ಗಮನ ವಹಿಸಬೇಕು.ಉದ್ಯೋಗ ಕಲ್ಪಿಸಬೇಕಾದ ಯೋಜನೆಗಳು ಕಡತಗಳಲ್ಲೇ ಉಳಿಯಬಾರದು. ಸಚಿವ ಸಂಪುಟ ಸಭೆಯಲ್ಲಿ ನಿಟ್ಟೆ ಜವಳಿ ಪಾರ್ಕ್ ವಿಚಾರವನ್ನು ಆದ್ಯತೆಯಿಂದ ಚರ್ಚಿಸಿ, ಯೋಜನೆಗೆ ಇರುವ ಅಡೆತಡೆಗಳನ್ನು ನಿವಾರಿಸಿ ಕಾಮಗಾರಿ ಕೂಡಲೇ ಆರಂಭಿಸಬೇಕು ಎಂದು ಒತ್ತಾಯಿಸಿದರು.ಜವಳಿ ಪಾರ್ಕ್ ಕೇವಲ ಒಂದು ಪ್ರದೇಶಕ್ಕೆ ಸೀಮಿತವಾದ ಯೋಜನೆಯಲ್ಲ. ಇದು ಕರಾವಳಿಯ ಯುವಜನರ ಉದ್ಯೋಗ ಮತ್ತು ಭವಿಷ್ಯಕ್ಕೆ ಸಂಬಂಧಿಸಿದ ಪ್ರಮುಖ ಯೋಜನೆಯಾಗಿದೆ. ಮುಂಬರುವ ಮುಖ್ಯಮಂತ್ರಿ ಭೇಟಿಯ ಸಂದರ್ಭದಲ್ಲೂ ಯೋಜನೆಗೆ ಆದ್ಯತೆ ನೀಡಿ, ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಆನಂದ ಜೋಸೆಫ್, ಪೀಟರ್ ಸಾಲ್ಡಾನ, ಶೋಭಾ ಮೂಲ್ಯ, ಒಪೀಲಿಯಾ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.







.
.
.
.
.
.
.
.
.
.
.
.
.
.
.
.
.
.
.
.
