

ನವದೆಹಲಿ,ನ.06: ಸರ್ಕಾರಿ ಸವಲತ್ತುಗಳನ್ನು ಪಡೆಯಲು ಈ ಹಿಂದೆ ಇದ್ದ ಆಧಾರ್ ಕಾರ್ಡ್ ದಾಖಲೆಯ ಬದಲಿಗೆ ಮತದಾರರ ಗುರುತಿನ ಚೀಟಿ ಸಂಖ್ಯೆ ಹಾಗೂ ಬಯೋಮೆಟ್ರಿಕ್ ದೃಢೀಕರಣವನ್ನು ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಕೇಂದ್ರ ಪಂಚಾಯತ್ರಾಜ್ ಸಚಿವ ರಾಜೀವ್ ರಂಜನ್ ಸಿಂಗ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಸರ್ಕಾರಿ ಯೋಜನೆಗಳ ಫಲಾನುಭವಿಗಳ ಸರಿಯಾದ ಗುರುತಿಸುವಿಕೆ ಮತ್ತು ಪಾವತಿಗಳಿಗಾಗಿ ಇನ್ನು ಮುಂದೆ ಮತದಾರರ ಗುರುತಿನ ಚೀಟಿ ಹಾಗೂ ಬಯೋಮೆಟ್ರಿಕ್ ಒದಗಿಸುವುದನ್ನು ಕಡ್ಡಾಯಗೊಳಿಸಲಾಗುವುದು ಎಂದಿದ್ದಾರೆ. ಆಧಾರ್ ಕಾರ್ಡ್ಗಳು ಅತ್ಯಂತ ಸುಲಭವಾಗಿ ಸಿಗುವುದರಿಂದ, ಅರ್ಹ ಫಲಾನುಭವಿಗಳನ್ನು ಗುರುತಿಸಲು ಆಧಾರ್ ಕಾರ್ಡ್ ಅಷ್ಟೊಂದು ವಿಶ್ವಾಸಾರ್ಹವಲ್ಲ ಎಂಬುದು ಸಚಿವರ ವಾದವಾಗಿದೆ.
ಪಂಚಾಯತ್ ರಾಜ್ ಸಚಿವಾಲಯವು ವೈಯಕ್ತಿಕವಾಗಿ ನೇರ ನಗದು ವರ್ಗಾವಣೆ ಮಾಡುವ ಯೋಜನೆಗಳನ್ನು ನೇರವಾಗಿ ನಿರ್ವಹಿಸುವುದಿಲ್ಲ. ಇದರೊಂದಿಗೆ ಯಾವೆಲ್ಲಾ ಯೋಜನೆಗಳು ಈ ಹೊಸ ಕಡ್ಡಾಯ ನಿಯಮದ ವ್ಯಾಪ್ತಿಗೆ ಬರಲಿವೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಿಲ್ಲ.
ಆಧಾರ್ ಕುರಿತಂತೆ ಕೇಂದ್ರ ಸರ್ಕಾರದ ಬದಲಾಗುತ್ತಿರುವ ನಿಲುವನ್ನು ಸಿಪಿಐ(ಎಂ) ಪಕ್ಷವು ಬಲವಾಗಿ ಪ್ರಶ್ನಿಸಿದೆ. ಈ ಹಿಂದೆ ಸುಪ್ರೀಂ ಕೋರ್ಟ್ಗೆ ಆಧಾರ್ ಕಡ್ಡಾಯವಲ್ಲ ಎಂದು ಭರವಸೆ ನೀಡಿದ್ದ ಕೇಂದ್ರ ಸರ್ಕಾರ, ತರುವಾಯ ಎಲ್ಲಾ ಕಲ್ಯಾಣ ಯೋಜನೆಗಳಿಗೂ ಅದನ್ನು ವಿಸ್ತರಿಸಿತ್ತು. ಆದರೆ ಈಗ ಆಧಾರ್ ವಿಶ್ವಾಸಾರ್ಹವಲ್ಲ ಎಂದು ಓಟರ್ ಐಡಿಯನ್ನು ಕಡ್ಡಾಯಗೊಳಿಸಲು ಹೊರಟಿರುವುದು ಬಡವರ ಹಕ್ಕು ಕಸಿಯುವ ಯತ್ನ ಎಂದು ಆರೋಪಿಸಿದೆ.
ಆಧಾರ್ ಆಧಾರಿತ ವ್ಯವಸ್ಥೆಯಿಂದ ದಿಢೀರನೆ ಹಿಂದೆ ಸರಿಯುವುದು ಈಗಾಗಲೇ ನೆರವು ಪಡೆಯಲು ಪರದಾಡುತ್ತಿರುವ ಗ್ರಾಮೀಣ ಹಾಗೂ ಬಡ ಕುಟುಂಬಗಳ ಸಂಕಷ್ಟವನ್ನು ಹೆಚ್ಚಿಸಲಿದೆ ಎಂದು ಸಿಪಿಐ(ಎಂ) ಎಚ್ಚರಿಸಿದೆ. ಬಯೋಮೆಟ್ರಿಕ್ ಯಂತ್ರಗಳಲ್ಲಿ ಕಣ್ಣಿನ ಪಾಪೆ ಸ್ಕ್ಯಾನ್ ಆಗದ ಹಿರಿಯ ಮಹಿಳಾ ಕೃಷಿ ಕಾರ್ಮಿಕರು ಹಾಗೂ ಬೆರಳಚ್ಚು ಸವೆದುಹೋಗಿರುವ ದಿನಗೂಲಿ ಕಾರ್ಮಿಕರು ತಾಂತ್ರಿಕ ಕಾರಣಗಳಿಂದ ಸೌಲಭ್ಯ ಕಳೆದುಕೊಳ್ಳುತ್ತಿದ್ದಾರೆ. ಸ್ಮಾರ್ಟ್ಫೋನ್ ಆಧಾರಿತ ಇ-ಕೆವೈಸಿ ಪ್ರಕ್ರಿಯೆಗಳು ಈಗಾಗಲೇ ಗ್ರಾಮೀಣ ಜನರಿಗೆ ಹೊರೆಯಾಗಿವೆ ಎಂದು ಸಿಪಿಐ(ಎಂ) ಪ್ರಸ್ತಾಪಿಸಿದೆ.





.
.
.
.
.
.
.
.
.
.
.
.
.
.
.
.
.
.
.
.
