Share this news

ಕೋಟಾ (ರಾಜಸ್ಥಾನ): ಮದುವೆಗೆಂದು ಮಕ್ಕಳ ಜತೆ ಹೊರಟ್ಟಿದ್ದ ದಂಪತಿ ತಮ್ಮ ಮೂರು ವರ್ಷದ ಪುಟ್ಟ ಮಗುವನ್ನು ಕಾರಿನಲ್ಲೇ ಮರೆತು ಮಂಟಪಕ್ಕೆ ಹೋಗಿದ್ದು,ಇತ್ತ ಮಗು ಕಾರಿನಲ್ಲೇ ಉಸಿರುಗಟ್ಟಿ ಮೃತಪಟ್ಟ ಹೃದಯವಿದ್ರಾವಕ ಘಟನೆ ರಾಜಸ್ಥಾನದ ಕೋಟಾ ಎಂಬಲ್ಲಿ ನಡೆದಿದೆ.
ಪ್ರದೀಪ್ ನಾಗರ್ ಆತನ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಕಾರಿನಲ್ಲಿ ಮದುವೆ ತೆರಳಿದ್ದಾರೆ. ಮುಂಭಾಗದ ಸೀಟಿನಲ್ಲಿ ಪತ್ನಿ ಕುಳಿತುಕೊಂಡರೆ, ಹಿಂಬದಿ ಸೀಟಿನಲ್ಲಿ ಮೂರು ವರ್ಷದ ಪುತ್ರಿ ಗೋರ್ವಿಕಾ ನಾಗರ್‌ಳನ್ನು ಮಲಗಿಸಿದ್ದರು. ಪುಟ್ಟ ಕಂದಮ್ಮನ ಜೊತೆ ಆಕೆಯ ಪುಟ್ಟ ಅಕ್ಕ ಕುಳಿತಿದ್ದಳು. ಮದುವೆ ಮಂಟಪದ ಮಂಭಾಗಕ್ಕೆ ಆಗಮಿಸಿದ ಪ್ರದೀಪ್ ನಾಗರ್ ಕಾರು ನಿಲ್ಲಿಸಿದ್ದಾರೆ. ಈ ವೇಳೆ ಮುಂಭಾಗದ ಸೀಟಿನಲ್ಲಿ ಕುಳಿತಿದ್ದ ಪತ್ನಿ ಹಾಗೂ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಪುಟ್ಟ ಮಗಳು ಕಾರಿನಿಂದ ಇಳಿದಿದ್ದಾರೆ. ಬಳಿಕ ಪ್ರದೀಪ್ ನಾಗರ್ ಕಾರನ್ನು ಪಾರ್ಕಿಂಗ್ ಮಾಡಲು ತೆರಳಿದ್ದಾರೆ.ಆದರೆ ಪ್ರದೀಪ್ ಮಗುವನ್ನು ಕಾರಿನಲ್ಲೇ ಮರೆತು ಕಾರು ಪಾರ್ಕ್ ಮಾಡಿ 3 ವರ್ಷದ ಗೋರ್ವಿಕಾ ನಾಗರ್‌ಳನ್ನು ಪತಿ ಪ್ರದೀಪ್ ಎತ್ತಿಕೊಂಡು ಬರಲಿದ್ದಾರೆ ಎಂದು ಪತ್ನಿ ಭಾವಿಸಿ ಮತ್ತೊಬ್ಬಳ ಮಗಳ ಕೈಹಿಡಿದು ಮದುವೆ ಮಂಟಪಕ್ಕೆ ತೆರಳಿದ್ದಾಳೆ. ಇತ್ತ ಪತಿ ಪ್ರದೀಪ್ ನಾಗರ್ ಕಾರು ಪಾರ್ಕಿಂಗ್ ಮಾಡಿ ಲಾಕ್ ಮಾಡಿ ಮದುವೆಗೆ ಆಗಮಿಸಿದ್ದಾರೆ.

ಮದುವೆಯಲ್ಲಿ ನೆಂಟರು, ಆಪ್ತರ ಜೊತೆ ಮಾತುಕತೆ, ಹರಟೆ ನಡೆದಿದೆ. ಮದುವೆ ಊಟ ಮುಗಿಸಿದ ಬಳಿಕ ನಮ್ಮ ಮಗು ಎಲ್ಲಿ ಎಂದು ಪ್ರದೀಪ್ ನಾಗರ್‌ನನ್ನು ಪತ್ನಿ ಕೇಳಿದ್ದಾಳೆ. ನೀನು ಕಾರು ಪಾರ್ಕ್ ಮಾಡಿ ಬರುವಾಗ ಮಗುವನ್ನು ಎತ್ತಿಕೊಂಡು ಬಂದಿಲ್ವಾ ಎಂದು ಪ್ರಶ್ನಿಸಿದ್ದಾಳೆ. ಗೊಂದಲ, ಆತಂಕ ಶುರುವಾಗಿದೆ. ಮಂಟಪದಲ್ಲಿ ಹುಡುಕಿದ್ದಾರೆ. ಮಗು ಪತ್ತೆ ಇಲ್ಲ. ಓಡೋಡಿ ಕಾರಿನತ್ತ ಧಾವಿಸಿದ್ದಾರೆ. ಈ ವೇಳೆ ಕಾರಿನ ಹಿಂಬದಿ ಸೀಟಿನಲ್ಲಿ ಮಲಗಿಸಿದ್ದ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿತ್ತು. ತಕ್ಷಣವೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗುವನ್ನು ತಪಾಸಣೆ ನಡೆಸಿದ ವೈದ್ಯರು ಮಗು ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ.
ದಂಪತಿ ಮಾಡಿದ ಎಡವಟ್ಟಿನಿಂದ ಏನೂ ಅರಿಯದ ಮುಗ್ದ ಕಂದಮ್ಮ ದಾರುಣವಾಗಿ ಉಸಿರು ಚೆಲ್ಲಿದ್ದು ನಿಜಕ್ಕೂ ಮನ ಕಲಕುವಂತಿದೆ

 

 

 

                        

                          

 

Leave a Reply

Your email address will not be published. Required fields are marked *