ಹೆಬ್ರಿ:ಕೌಟುಂಬಿಕ ಕಲಹದ ವಿಚಾರದಲ್ಲಿ ಅಣ್ಣ ತಮ್ಮಂದಿರ ನಡುವೆ ನಡೆದ ಜಗಳವು ತಮ್ಮನ ಕೊಲೆಯಲ್ಲಿ ಅಂತ್ಯವಾಗಿರುವ ದಾರುಣ ಘಟನೆ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಲ್ಕೂರು ಗ್ರಾಮದ ಕಜ್ಕೆ ಅರಮನೆಜಡ್ಡು ಎಂಬಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.
ಮಂಜುನಾಥ(35) ಎಂಬವರು ಮೃತಪಟ್ಟ ದುರ್ದೈವಿ.
ಅಣ್ಣ ತಮ್ಮಂದಿರಾದ ಮಂಜುನಾಥ ಮತ್ತು ವಿಶ್ವನಾಥ ರವರು ಸಣ್ಣಪುಟ್ಟ ಕಾರಣಗಳಿಗೆ ಆಗಾಗ ಗಲಾಟೆ ಮಾಡಿಕೊಳ್ಳುತ್ತಿದ್ದರು.
ಎಂದಿನಂತೆ ಮಾ.30ರ ಶನಿವಾರ ರಾತ್ರಿ ಮತ್ತೆ ಇವರ ನಡುವೆ ಗಲಾಟೆ ಆರಂಭವಾಗಿದೆ. ಸಹೋದರನಾದ ಮಂಜುನಾಥ್ ಅವರು ವಿಶ್ವನಾಥ ಅವರನ್ನು ಉದ್ದೇಶಿಸಿ ನನ್ನ ಹೆಂಡತಿ ಮನೆ ಬಿಟ್ಟು ಹೋಗಲು ನೀನೇ ಕಾರಣವೆಂದು ಹೇಳಿದ್ದು ಇದರಿಂದ ಮಾತಿಗೆ ಮಾತು ಬೆಳೆದು ಇದೇ ವಿಚಾರದಲ್ಲಿ ವಿಶ್ವನಾಥ ರವರು ಕೋಪಗೊಂಡು ಛಾವಣಿಯಲ್ಲಿದ್ದ ದೊಣ್ಣೆಯನ್ನು ತೆಗೆದುಕೊಂಡು ಮಂಜುನಾಥ (35)ರವರ ತಲೆಗೆ ಬಲವಾಗಿ ಹೊಡೆದ ಪರಿಣಾಮ ತೀವೃ ಗಾಯಗೊಂಡು ಮೃತಪಟ್ಟಿದ್ದಾರೆ.ಗಲಾಟೆಯ ವೇಳೆ ಇವರಿಬ್ಬರು ಮದ್ಯಪಾನ ಮಾಡಿಕೊಂಡಿದ್ದರು ಎನ್ನಲಾಗಿದೆ.
ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.