ಕಾರ್ಕಳ: ಇತ್ತೀಚಿನ ದಿನಗಳಲ್ಲಿ ಕಾಡುಪ್ರಾಣಿಗಳ ಹಾವಳಿಯಿಂದ ರೈತರು ಸಾಕಷ್ಟು ಕಷ್ಟನಷ್ಟ ಅನುಭವಿಸಿದ್ದು ಇದೀಗ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಸೋಮೇಶ್ವರ ಆಗುಂಬೆ ಕಾಡಿನಲ್ಲಿ ಒಂಟಿ ಸಲಗ ಕಾಣಿಸಿಕೊಂಡಿದ್ದು ಈ ಭಾಗದ ಜನ ಆತಂಕದಿಂದ ಕಾಲ ಕಳೆಯುವಂತಾಗಿದೆ. ಹೆಬ್ರಿಯ ಸೋಮೇಶ್ವರ ನಾಡ್ಪಾಲು ಕೂಡ್ಲು ಆಗುಂಬೆ ಪರಿಸರದಲ್ಲಿ ಒಂಟಿ ಸಲಗ ಓಡಾಡುತ್ತಿದ್ದು ಈ ಭಾಗದ ಓಡಾಡುವವರು ಎಚ್ಚರಿಕೆಯಿಂದ ಓಡಾಡುವುದು ಸೂಕ್ತ.
ಕಳೆದ ನಾಲ್ಕು ದಿನಗಳಿಂದ ಹೆಬ್ರಿ ತಾಲೂಕಿನ ನಾಡ್ಪಾಲು ನೆಲ್ಲಿಕಟ್ಟೆ ಮೀನಾ ಪೂಜಾರ್ತಿ ಎಂಬವರ ಮನೆಯ ಕೃಷಿ ಜಮೀನಿಗೆ ದಾಳಿ ನಡೆಸಿದ ಒಂಟಿ ಸಲಗ ಹಲಸು ಹಾಗೂ ತೆಂಗು,ಬಾಳೆ ಕೃಷಿ ಧ್ವಂಸಗೊಳಿಸಿದೆ. ಕಳೆದ ಬಾರಿ ಕಬ್ಬಿನಾಲೆಯ ಮುಂಡಾಣಿ ತಿಂಗಳೆ ಬಳಿ ಆನೆಯು ಕೃಷಿಯನ್ನು ನಾಶಪಡಿಸಿತ್ತು.
ಅರಣ್ಯ ಇಲಾಖೆಯ ಮಾಹಿತಿ ಪ್ರಕಾರ ಈ ಒಂಟಿ ಸಲಗವು ಸುಳ್ಯದ ಕುಕ್ಕೆ ಸುಬ್ರಹ್ಮಣ್ಯ ದಿಂದ ಬೆಳ್ತಂಗಡಿ ಮೂಲಕ ನಾರಾವಿ , ಮಾಳ ಘಾಟ್ ಮೂಲಕ ವಾಲಿಕುಂಜ ಬೆಟ್ಟದ ಮೇಲಿನ ಕಬ್ಬಿನಾಲೆಯ ತಿಂಗಳಮಕ್ಕಿ , ತೆಂಗುಮಾರ್, ಕಿಗ್ಗ , ಬರ್ಕಣ ಮಲ್ಲಂದೂರು , ಆಗುಂಬೆ ಯ ಮೂಲಕ ನಗರ ಹೊಸನಗರ ವರೆಗೆ ಸಂಚರಿಸುತ್ತದೆ. ಆದರೆ ಯಾವುದೇ ಪ್ರಾಣ ಹಾನಿ ಮಾಡಿಲ್ಲ.
ಕಳೆದ ಇಪ್ಪತ್ತು ವರ್ಷಗಳ ಹಿಂದೆ ಹೆಬ್ರಿ ಸಮೀಪದ ಸಂತೆಕಟ್ಟೆ ಎಂಬಲ್ಲಿ ಒಂಟಿಸಲಗವು ಓರ್ವ ವ್ಯಕ್ತಿಯನ್ನು ಸೊಂಡಿಲಿನಲ್ಲಿ ನೆಲಕ್ಕೆ ಕುಕ್ಕಿತ್ತು.ಅದೃಷ್ಟವಶಾತ್ ಆತ ಪ್ರಾಣಾಪಾಯದಿಂದ ಪಾರಾಗಿದ್ದ.
ಪ್ರವಾಸಿಗರೇ ಎಚ್ಚರ :
ಕಬ್ಬಿನಾಲೆ,ಕೂಡ್ಲು ಫಾಲ್ಸ್, ಅಗುಂಬೆ ಸೂರ್ಯಾಸ್ತ ವೀಕ್ಷಣಾ ಪ್ರದೇಶದ, ಮಲ್ಲಂದೂರು ಬರ್ಕಣ ಫಾಲ್ಸ್ ಗಳಿಗೆ ಬರುವ ಪ್ರವಾಸಿಗರೆ ಹುಷಾರಾಗಿರಿ, ಒಂಟಿಸಲಗದ ಸಂಚಾರ ಇರುವ ಹಿನ್ನೆಲೆಯಲ್ಲಿ ಕಾಡುದಾರಿಯ ಪ್ರಯಾಣ ಅಷ್ಟು ಸುರಕ್ಷಿತವಲ್ಲ,ಏನಿದ್ದರೂ ಅರಣ್ಯ ಇಲಾಖೆಯ ಮಾಹಿತಿಯನ್ನು ಆಧರಿಸಿ ಸಂಚರಿಸುವುದು ಉತ್ತಮ,ಇಲ್ಲವಾದಲ್ಲಿ ಆನೆ ದಾಳಿಯಿಂದ ಪ್ರಾಣಕ್ಕೂ ಅಪಾಯ ಎದುರಾಗುವ ಸಾಧ್ಯತೆಗಳಿವೆ.