Share this news

ಉಡುಪಿ: ಪ್ರಥಮ ಬಾರಿಗೆ ಆಯ್ಕೆಯಾಗಿರುವ ಶಾಸಕರುಗಳ ಕ್ಷೇತ್ರದ ಜನರು ಅಭಿವೃದ್ಧಿ ವಿಚಾರವಾಗಿ ಶಾಸಕರ ಮೇಲೆ ಹೆಚ್ಚಿನ ನಿರೀಕ್ಷೆಯಿರಿಸಿದ್ದು, ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಜನರಿಂದ ದಿನಂಪ್ರತಿ ಮನವಿಗಳನ್ನು ಸ್ವೀಕರಿಸುತ್ತಿದ್ದು, ಜನರ ಬೇಡಿಕೆಗಳಿಗೆ ಪೂರಕವಾಗಿ ಕ್ಷೇತ್ರದಲ್ಲಿ ಹೊಸ ಅಗತ್ಯ ಯೋಜನೆಗಳನ್ನು ಪ್ರಾರಂಭಿಸಲು ತಮ್ಮ ಕ್ಷೇತ್ರಗಳಿಗೆ ತಲಾ 100 ಕೋಟಿ ವಿಶೇಷ ಅನುದಾನ ನೀಡುವಂತೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರನ್ನು ಬೆಳಗಾವಿಯ ಅಧಿವೇಶನ ಸಂದರ್ಭದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಲಾಯಿತು.

ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಹಿತ ಬಿ.ಜೆ.ಪಿ. ಹಾಗೂ ಜೆ.ಡಿ.ಎಸ್. ಪಕ್ಷದಿಂದ ಪ್ರಥಮ ಬಾರಿಗೆ ಆಯ್ಕೆಯಾದ ಶಾಸಕರು ಮನವಿ ಸಲ್ಲಿಸಿ ಶಾಸಕರಾದಾಗಿನಿಂದಲೂ ಯಾವುದೇ ಗಮನಾರ್ಹ ಅನುದಾನ ಲಭಿಸದೆ ಜನರ ಆದ್ಯತೆಯ ಬೇಡಿಕೆಗಳಿಗೆ, ತುರ್ತು ಸಮಸ್ಯೆಗಳಿಗೆ, ಮೂಲಭೂತ ಸೌಕರ್ಯಗಳ ನಿರ್ವಹಣೆಗೆ ಹಾಗೂ ಅಭಿವೃದ್ಧಿಯ ಕಾಮಗಾರಿಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಪ್ರಗತಿಯಲ್ಲಿರುವ ಅನೇಕ ಕಾಮಗಾರಿಗಳು ನಿಧಾನಗತಿಯಲ್ಲಿರುವ ಹಿನ್ನಲೆಯಲ್ಲಿ ವಿಶೇಷ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ವಿನಂತಿಸಿದರು.

ಪ್ರಥಮ ಬಾರಿ ಶಾಸಕರಾಗಿ ಆಯ್ಕೆಯಾದ ಶಾಸಕರುಗಳ ಕ್ಷೇತ್ರಕ್ಕೆ ಮಳೆಹಾನಿ, ಕೃಷಿಹಾನಿ, ಸಮುದ್ರ ಕೊರೆತ, ಆಸ್ಪತ್ರೆ, ಶಾಲಾ ಕಟ್ಟಡ, ರಸ್ತೆಗಳ ದುರಸ್ಥಿ-ನಿರ್ಮಾಣ, ಕಾಲುಸಂಕ & ಮೋರಿಗಳ ದುರಸ್ಥಿ-ನಿಮಾಣ, ನದಿ ದಂಡೆ ಸಂರಕ್ಷಣೆ ಹಾಗೂ ವಿದ್ಯುತ್-ದಾರಿ ದೀಪಗಳ ಸೌಕರ್ಯ ಇತ್ಯಾದಿ ಸಮಸ್ಯೆಗಳಿಗೆ ಸ್ಪಂದಿಸಲು 2023-24 ಮತ್ತು 2024-25ನೇ ಸಾಲಿಗೆ ತಲಾ ರೂ. 50 ಕೋಟಿ ಒಟ್ಟಾರೆ ರೂ. 100 ಕೋಟಿ ವಿಶೇಷ ಅನುದಾನ ಮಂಜೂರು ಮಾಡುವಂತೆ ಸಿಎಂ ಗೆ ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆ, ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಹೇಶ್ ತೆಂಗಿನಕಾಯಿ, ದೊಡ್ಡ ಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಧೀರಜ ಮುನಿರಾಜು, ಸಕಲೇಶಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜು, ಹಾಸನ ವಿಧಾನಸಭಾ ಕ್ಷೇತ್ರದ ಶಾಸಕರಾದ ಸ್ವರೂಪ್ ಪ್ರಕಾಶ್, ಹುಕ್ಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ನಿಖಿಲ್ ಕತ್ತಿ, ಹಮನಾಬಾದ್ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿದ್ದು ಪಾಟೀಲ್, ದೇವದುರ್ಗ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಮತಿ ಕರೆಮ್ಮ ನಾಯ್ಕ್ ರವರು ಮೊದಲಾದವರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *