Share this news

ಹೆಬ್ರಿ: ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಹಣ ದುರುಪಯೋಗ ಪ್ರಕರಣದಲ್ಲಿ ಅಮಾನತುಗೊಂಡ ಸಿಬ್ಬಂದಿ ಶಂಕರ ನಾಯ್ಕ್ ಅವರು ಸಂಘದ ಕಾರ್ಯನಿರ್ವಹಣಾಧಿಕಾರಿ,ಅಧ್ಯಕ್ಷ ಹಾಗೂ ಆಡಳಿತ ಮಂಡಳಿಯ ಸದಸ್ಯರ ವಿರುದ್ಧ ಮಾನಸಿಕ ಕಿರುಕುಳ ಹಾಗೂ ದೌರ್ಜನ್ಯ ನಡೆದಿದೆ ಎಂದು ದೂರು ನೀಡಿದ್ದಾರೆ.

ಈ ಪ್ರಕರಣ ಹಿನ್ನಲೆ ಏನು?

ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಸಿಬ್ಬಂದಿಯಾಗಿರುವ ಶಿವಪುರ ಗ್ರಾಮದ ಶಂಕರ ನಾಯ್ಕ್ ಎಂಬವರು ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಗುಮಾಸ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಕಳೆದ ಕೆಲ ತಿಂಗಳ ಹಿಂದೆ ಸಂಘದ 88 ಸಾವಿರ ಹಣ ದುರುಪಯೋಗ ಆರೋಪದ ಮೇಲೆ ಅವರನ್ನು ಆಡಳಿತ ಮಂಡಳಿಯ ನಿರ್ಣಯದಂತೆ ಅಮಾನತು ಮಾಡಲಾಗಿತ್ತು. ಬಳಿಕ ಮಾನವೀಯ ನೆಲೆಯಲ್ಲಿ 88 ಸಾವಿರ ಹಣದ ಪೈಕಿ 60 ಸಾವಿರ ಹಣವನ್ನು ಮನ್ನಾ ಮಾಡಿ ಕೇವಲ 28 ಸಾವಿರ ಹಣ ಪಾವತಿಸುವಂತೆ ಸಂಘದ ಆಡಳಿತ ಮಂಡಳಿ ನಿರ್ಣಯಿಸಿತ್ತು.ಆದರೆ ಶಂಕರ ನಾಯ್ಕ್ ಅವರು ಸಂಘದ ನಿರ್ಣಯದ ವಿರುದ್ಧವೇ ತಿರುಗಿಬಿದ್ದು ಹಣ ಪಾವತಿಸಲು ಒಪ್ಪದ ಹಿನ್ನೆಲೆಯಲ್ಲಿ ಅವರನ್ನು ಜೂನ್ 13 ರಂದು ಅಮಾನತು ಮಾಡಲಾಗಿತ್ತು ಎಂದು ತಿಳಿದುಬಂದಿದೆ. ಅಮಾನತುಗೊಂಡ ಶಂಕರ ನಾಯ್ಕ್ ಅವರ ವೇತನದಿಂದ ತಿಂಗಳಿಗೆ 5 ಸಾವಿರ ಹಣವನ್ನು ಸಂಘದ ಖಾತೆಗೆ ಜಮಾ ಮಾಡುವ ನಿರ್ಧಾರಕ್ಕೆ ಶಂಕರ ನಾಯ್ಕ್ ಒಪ್ಪದೇ ಸಂಘದ ವಿರುದ್ಧವೇ ಸುಳ್ಳು ದೂರು ನೀಡಲು ಮುಂದಾಗಿದ್ದಾರೆ ಎನ್ನುವುದು
ಸಂಘದ ಆಡಳಿತ ಮಂಡಳಿಯ ಆರೋಪವಾಗಿದೆ.
ಆದರೆ ಈಗಾಗಲೇ ಅಮಾನತುಗೊಂಡಿರುವ ಶಂಕರ ನಾಯ್ಕ್ ಅವರು,ಸಂಘದ ಕಾರ್ಯನಿರ್ವಾಹಣಾಧಿಕಾರಿ ಶೀನ ನಾಯ್ಕ್, ಅಧ್ಯಕ್ಷ ನವೀನ್ ಅಡ್ಯಂತಾಯ ಸಂಘದ 12 ಜನ ನಿರ್ದೇಶಕರು ಹಾಗೂ ನಾಡ್ಪಾಲು ಗ್ರಾಮದ ಕಾಸನಮಕ್ಕಿಯ ಸುಂದರ ಎಂಬವರು ತನ್ನ ವಿರುದ್ಧ,ತಾನು ಪರಿಶಿಷ್ಟ ಪಂಗಡಕ್ಕೆ ಸೇರಿದವರು ಎಂದು ಗೊತ್ತಿದ್ದೂ ಉದ್ದೇಶಪೂರ್ವಕವಾಗಿ ಸಂಬಳ ನೀಡದೆ ತನ್ನನ್ನು ಕೆಲಸದಿಂದ ಅಮಾನತುಗೊಳಿಸಿ ಆರ್ಥಿಕ ಬಹಿಷ್ಕಾರ ಮಾಡಿರುತ್ತಾರೆ ಅಲ್ಲದೇ ತನ್ನ ವಿರುದ್ದ ಮಾನಸಿಕ ಕಿರುಕುಳ,ದ್ವೇಷಪೂರಿತ ಸುಳ್ಳು ಮೊಕದ್ದಮೆ ಹಾಗೂ ಕಾನೂನು ವ್ಯವಹಾರ ಮಾಡಿ ಮಾನಸಿಕ ಹಿಂಸೆ ನೀಡಿ ದಲಿತ ದೌರ್ಜನ್ಯ ಎಸಗಿದ್ದಾರೆ ಎಂದು ಹೆಬ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ದಲಿತ ದೌರ್ಜನ್ಯ ಪ್ರಕರಣ ದಾಖಲಾಗಿದೆ.

 

 

Leave a Reply

Your email address will not be published. Required fields are marked *