✍️ ವಿ.ಕೆ ವಾಲ್ಪಾಡಿ
ಈ ಬಾರಿಯ ವಿಧಾನಸಭಾ ಅಧಿವೇಶನದಲ್ಲಿ ಇಡೀ ಸದನದಲ್ಲಿ ಅರಚಾಡಿದ್ದೇ ಹೊರತು ಮಂಡಿಸಿರುವ ವಿಷಯಗಳಿಗೆ ಜವಾಬ್ದಾರಿಯುತವಾಗಿ ಸರಕಾರ ಉತ್ತರಿಸಿಲ್ಲ , ಉತ್ತರಿಸಿರುವ ಕೆಲವದನ್ನು ವಿಪಕ್ಷೀಯರೂ ಕೇಳಿಸಿಕೊಂಡಿಲ್ಲ ಎಂಬುದನ್ನು ಸದನದ ಚಿತ್ರೀಕರಣವೇ ಸಾಕ್ಷಿಯಿದೆ.
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮಾತಾಡಿಲ್ಲವೆನ್ನುವ ಕೊರಗು ಇಲ್ಲವಾದರೂ ಅವರ ಮಾತಿನಲ್ಲಿ ಆಡಳಿತ ಪಕ್ಷವನ್ನು ಚುಚ್ಚುವಷ್ಟು ಮೊನಚಿರಲಿಲ್ಲ ಮತ್ತು ನುಡಿಗಳು ಆತ್ಮಸಾಕ್ಷಿಗನಗುಣವಾಗಿರಲಿಲ್ಲ. ಅವರ ಮಾತು ಬಾಣಸಿಗನು ದೂರದಲ್ಲೇ ನಿಂತು ,ಒಲೆಯಮೇಲಿರುವ ಸಾಂಬಾರಿನ ಹಂಡೆಗೆ ಹಿಡಿ ಉಪ್ಪು ಎಸೆದ ಹಾಗೆ ಇತ್ತು.
ಆರ್. ಅಶೋಕ್ ಸ್ವಭಾವತಃ ಸಣ್ಣ ಧ್ವನಿಯವರು,ಎರಡು ಗುಂಪುಗಳ ಬಿಜೆಪಿಯ ನಾಯಕರು. ಅವರು ‘ಬೆ‘(ಬೆಂಗಳೂರು) ಅಂತ ಬಾಯಿ ತೆರೆದರೆ ಸಾಕು ಆ ಕಡೆಯಿಂದ ಅವರದೇ ಪಕ್ಷದ ಮತ್ತೊಂದು ಬಣದ ಬಸನೇಗೌಡ ಪಾಟೀಲ ಯತ್ನಾಳ್ ಅವರು ‘ ವರ್ಷಿ’ ಎಂದು ಪೂರ್ಣಗೊಳಿಸಿ ಮಾತು , ಅರ್ಥ ಎಲ್ಲ ಹಾಳು ಮಾಡುವುದಕ್ಕೆ ಹೊಂಚುಹಾಕುತ್ತಿರುತ್ತಾರೆ! ಆ ರೀತಿಯ ಸಂಧಿಗ್ಧ ಪರಿಸ್ಥಿತಿಯಲ್ಲಿದ್ದರೂ ಕೂಡ ಆಡಿದ ಮಾತಿಗೆ ಅವರೇ ಜವಾಬ್ದಾರನಾಗುವ ಇತರ ಶಾಸಕರ ಮಾತಿಗೂ ಬೆಂಬಲ ಕೊಡುವುದಕ್ಕೆ ಅಶೋಕ್ ಅಷ್ಟೊಂದು ಆಸಕ್ತಿ ತೋರದಿದ್ದುದು ಗೆಲ್ಲುವ ಆಟವನ್ನು ಸೋಲಿಸಿದ ನಾಯಕನಂತಾಗಿಬಿಟ್ಟಿದ್ದಾರೆ.
ಶಾಸಕರಗಳಲ್ಲಿ ವಿ. ಸುನಿಲ್ ಕುಮಾರ್ ಮಾತನಾಡಿದ್ದು ಇಡೀ ಸದನದಲ್ಲೇ ಪ್ರತಿಧ್ವನಿಸುತ್ತಿತ್ತು. ಆಡಳಿತಪಕ್ಷಕ್ಕೆ ಸವಾಲು ಹಾಕುವುದೇ ಆದರೂ ಸುನಿಲ್ ಕುಮಾರ್ ಅವರ ಕಂಚಿನ ಕಂಠದ ಕಾರಣಕ್ಕೆ ಅವರ ಎಲ್ಲ ಮಾತುಗಳನ್ನು ಸದನವೇ ಆಲಿಸುತ್ತದೆ. ಈ ಬಾರಿಯ ಕಲಾಪದ ಎಲ್ಲ ದಿನಗಳಿಗೂ ಸುನಿಲ್ ಕುಮಾರ್ ಉತ್ತಮ ಸದನಪಟುವಾಗಿ ಕಾಣಿಸಿಕೊಂಡಿರುವ ಅದೃಷ್ಟವನ್ನು ವಿಪಕ್ಷ ಒಲಿಸಿಕೊಳ್ಳಬೇಕಾಗಿತ್ತು. ಒಂದು ಬದಿಯಿಂದ ಜೆ ಡಿ ಎಸ್ ಕೂಡಾ ಸುನಿಲ್ ಮಾತಿನ ಪರವಾಗಿಯೇ ಇದ್ದಿರುವುದನ್ನೂ ವಿಪಕ್ಷ ನಾಯಕ ಆರ್. ಅಶೋಕ್ ನಿರ್ಲಕ್ಷ್ಯಕ್ಕೊಳಪಡಿಸಿದರು. ತಾನು ಸಿದ್ಧರಾಮಯ್ಯರ ಬೆಂಬಲಿಗ ಅನ್ನುವ ಆರೋಪಕ್ಕೆ ಸಾಕ್ಷಿಯಾದರು.
ಮುಂದಿನ ಉತ್ತರಗಳು, ವಾಗ್ವಾದಗಳು ಬೇರೆ ವಿಚಾರ.
ಹನಿಟ್ರಾಪ್ ಗೆ ಸಂಬಂಧಪಟ್ಟ ಮತ್ತು ರನ್ಯಾಳಿಂದಾಗಿರುವ ಅಕ್ರಮ ಬಂಗಾರ ಸಾಗಾಟದಲ್ಲಿ ರಾಜ್ಯ ಪೊಲೀಸರ ಬೆಂಬಲ . ಆ ಎರಡೇ ವಿಚಾರಗಳನ್ನು ಪದರಪದರವಾಗಿ ಮಂಡನೆ ಮಾಡುವಲ್ಲಿ ಬಿಜೆಪಿಯು ಒಗ್ಗಟ್ಟಿನಿಂದ ಕೆಲಸ ಮಾಡಿದ್ದೇ ಆಗಿದ್ದರೆ ಈ ಬಾರಿಯ ಕಲಾಪವು ಸಿದ್ಧರಾಮಯ್ಯ ತಂಡವನ್ನೇ ಒದ್ದೆ ಮಾಡುತ್ತಿತ್ತು.
ಸದನದ ಕಲಾಪದಲ್ಲಿ ಬೇಸರ ತರಿಸುವವರು ಪ್ರಿಯಾಂಕ ಖರ್ಗೆಯವರು. ಅವರು ಚೆನ್ನಾಗಿ ಮಾತಾಡುವವರು,ಒಳ್ಳೆಯ ಸ್ವರಭಾರ ಕೂಡಾ ಇದೆ. ಬಿಜೆಪಿಯಲ್ಲಿ ಅಶ್ವತ್ಥನಾರಾಯಣ ಇರುವ ಹಾಗೆ ಕಾಂಗ್ರೆಸ್ಸಲ್ಲಿ ಪ್ರಿಯಾಂಕ ಖರ್ಗೆ.
ಅವರಲ್ಲಿ ಒಳ್ಳೆಯ ಮಾಹಿತಿ ಸಂಗ್ರಹದ ಆಸಕ್ತಿಯಿದೆ.ಆದರೆ ಆ ಎಲ್ಲ ಸಂಗ್ರಹಗಳು ಆರ್ ಎಸ್ ಎಸ್ ನಿಂದ ಎಲ್ಲ ಜನಸಂಘದ ಚಟುವಟಿಕೆಗಳ, ಲೋಕವೇ ಮರೆತುಬಿಟ್ಟದ್ದ ಸಂಗತಿಗಳು.! ಅವರು ಗ್ರಾಮೀಣಾಭಿವೃದ್ಧಿಯಂತಹ ಉತ್ತಮ ಖಾತೆಯನ್ನು ಹೊಂದಿದವರಾಗಿ ಮುಖ್ಯಮಂತ್ರಿಯವರಷ್ಟೇ ಜವಾಬ್ದಾರಿಯ ಸ್ಥಾನವನ್ನು ಹೊಂದಿದವರಾಗಿರುತ್ತಾರೆ. ಅವರ ಖಾತೆಯನ್ನೆ ಯೋಗ್ಯ ರೀತಿಯಲ್ಲಿ ನಿಭಾಯಿಸುವಂತಹ ಮಾತು ಕೆಲಸದಲ್ಲಿ ತೊಡಗಿದರೆ ಅವರಿಗೆ ಒಳ್ಳೆಯ ಭವಿಷ್ಯವಿದೆ.
ಯಾರು ಯಾರೊಡನೆಯೇ ಮಾತಾಡುತ್ತಿದ್ದರೂ ಪ್ರಿಯಾಂಕ ಖರ್ಗೆಯವರು ಒಮ್ಮೆ ಎದ್ದು ನಿಂತು ನಡುವೆ ಮಾತಾಡದಿದ್ದರೆ ಅವರಿಗೆ ಸಮಾಧಾನವೇ ಇಲ್ಲ. ಸಂಘಪರಿವಾರದರ ಬಗ್ಯೆ ಜನಾಭಿಪ್ರಾಯಗಳು ಏನೇನೆಲ್ಲ ಇವೆ ಎನ್ನುವುದು ಅದು ಲೋಕವೇ ತಿಳಿದುಕೊಂಡಿದೆ. ಆದರೆ ಖರ್ಗೆಯವರು ಸದನ ಕಲಾಪವನ್ನು ಅದಕ್ಕೇ ಸಂದಾಯ ಮಾಡುತ್ತಿರುತ್ತಾರೆ. ಅವರ ಮಾತಿನ ಧ್ವನಿ, ಭಾವಾಭಿನಯ ಅದೆಷ್ಟು ಉಗ್ರವಾಗಿತ್ತಾರೆಂದರೆ ಅವಕಾಶವಿರುವುದಾದರೆ ಎದುರು ಪಕ್ಷದವನ ಕುತ್ತಿಗೆ ಸೀಳಿಯಾರೋ ಅನ್ನುವಷ್ಟು ಸಿಟ್ಟಿನ ಅವತಾರಿಯಾಗುತ್ತಾರೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡಾ ಸಪ್ಪೆಮೋರೆಯಲ್ಲಿಯೇ ಸದನದಲ್ಲಿ ಆಸೀನರಾಗಿರುವುದಕ್ಕೆ ಸ್ವಪಕ್ಷದವರೇ ಕಾರಣ. ಪ್ರಮುಖವಾದ ಎರಡು ಪ್ರಕರಣಗಳು ಅಕ್ಷರಶಃ ನೆಮ್ಮದಿ ಕೆಡಿಸಿತ್ತು. ಸಚಿವ ಕೆ. ಎನ್. ರಾಜಣ್ಣ ಅವರು ಸದನದಲ್ಲಿ ಮಂಡಿಸಿದ ಇತ್ತೀಚಿನ ಹನಿಟ್ರಾಪ್ ಹಾವಳಿಯ ಕತೆ ಅದು ಆಡಳಿತ ಪಕ್ಷಕ್ಕೇ ಮೋಡಕವಿಸಿತ್ತು.
ಮಗ ಸತ್ತರೂ ದುಃಖವಿಲ್ಲ ಸೊಸೆ ಸಾಯಬೇಕು ಅನ್ನುವ ಸ್ಥಿತಿಯಲ್ಲಿ ರಾಜಣ್ಣನವರ ಬಾಂಬು ಕೊನೆಗೆ ಸಿದ್ಧರಾಮಯ್ಯನವರನ್ನೇ ಇಕ್ಕಟ್ಟಿಗೆ ಸಿಲುಕಿಸಿತು.
ವಿಪಕ್ಷ ಬಿಜೆಪಿಗೆ ಆಡಳಿತ ಪಕ್ಷವನ್ನು ಮಣಿಸಲು ಅಥವಾ ಬೆವರಿಳಿಸಲುಅನುಕೂಲಕರ ಪಿಚ್ ಒದಗಿತ್ತು ,ಒಳ್ಳೆಯ ಬೌಲಿಂಗ್ ಇತ್ತಾದರೂ ಪಂದ್ಯ ಸೋಲಿನತ್ತ ತಿರುಗಿದ್ದು ವಿಪಕ್ಷನಾಯಕತ್ವದ ದುರ್ಗತಿಯಷ್ಟೆ. ಹೊಂದಾಣಿಕೆಯ ರಾಜಕಾರಣದಿಂದಲೇ ಪ್ರಜಾಪ್ರಭುತ್ವದ ಗೋಪುರ ಅಲುಗಾಡುವುದು.
ಹನಿಟ್ರಾಪ್ ಎನ್ನುವ ಪಿಡುಗನ್ನು ನಿರ್ನಾಮಗೊಳಿಸುವುದಕ್ಕೆ ಸುಶಿಕ್ಷಿತ ಸಮಾಜವೇ ಒಂದಾಗಬೇಕಾಗಿದೆ.
ಎಲ್ಲ ಶಾಸಕ,ಎಲ್ಲ ರಾಜಕಾರಣಿ ಭ್ರಷ್ಟನಲ್ಲ,ವ್ಯಭಿಚಾರಿಯಲ್ಲ. ಆದರೆ ಈಗಿನ ತಂತ್ರಜ್ಞಾನದಿಂದ ಏನೂ ಮಾಡಲಿಕ್ಕಾಗುತ್ತಿರುವಾಗ ಅದನ್ನೆಲ್ಲ ಮಾಡುವುದಕ್ಕೆ ಜನಪ್ರತಿನಿಧಿಗಳೇ ಮುಂದಾಳ್ತನ ವಹಿಸಿಕೊಳ್ಳುವುದೆಂದರೆ ಸಾರ್ವಜನಿಕ ಜೀವನ ಅನೇಕರಿಗೆ ಬೇಡವಾಗಿದೆ.ಕಾಂಗ್ರೆಸ್ಸಿನ ಬಿ. ಆರ್. ಪಾಟೀಲ್ ಅವರು ಅದೇ ಅಭಿಪ್ರಾಯವನ್ನು ಸದನದ ಹೊರಗಡೆ ಹೇಳಿದ್ದಾರೆ ಕೂಡ. ಅವರ ಹಾಗಿನ ಅಭಿಪ್ರಾಯ ಇನ್ನೂ ಅನೇಕರಲ್ಲಿ ತುಂಬಿಕೊಂಡಿದೆ.
ಹನಿಟ್ರಾಪ್ ಕಸುಬನ್ನು ನಿರ್ವಹಿಸುವ ಯಾವನೇ ಆದರೂ ಆತ ಜೀವಮಾನವಿಡೀ ಕಂಬಿಗಳ ಹಿಂದೆಯೇ ಇರುವಂಥ ತೀರ್ಮಾನದ ಕಾನೂನು ಜ್ಯಾರಿಯಾಗಬೇಕು. ಅದೊಂದ ಸಮಾಜಕ್ಕೆ ಭಾರೀ ದೊಡ್ಡ ಪಿಡುಗು ಅನ್ನುವುದರಲ್ಲಿ ಎರಡು ಮಾತಿಲ್ಲ.
K