ಹೆಬ್ರಿ: ವರಂಗ ಗ್ರಾಮದ ಮುನಿಯಾಲಿನಲ್ಲಿ ಕಾರುಗಳೆರಡು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರು ಚಾಲಕರು ಸಹಿತ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಗುರುವಾರ ಮಧ್ಯಾಹ್ನ ಈ ಅಪಘಾತ ಸಂಭವಿಸಿದ್ದು, ಕಾರ್ಕಳ ಕಡೆಯಿಂದ ಹೆಬ್ರಿ ಕಡೆಗೆ ಹೋಗುತ್ತಿದ್ದ ಮಾರುತಿ ವಿಟಾರ ಬ್ರೀಝಾ ಹಾಗೂ ಮುನಿಯಾಲು ಕಡೆಗೆ ಬರುತ್ತಿದ್ದ ಆಲ್ಟೋ ಕಾರಿನ ನಡುವೆ ಈ ಅಪಘಾತ ಸಂಭವಿಸಿದೆ. ಈ ಭಾಗದ ರಸ್ತೆ ಕಾಮಗಾರಿ ನಡೆಯುತ್ತಿರುವ ಹಿನ್ನಲೆಯಲ್ಲಿ ಒಂದು ಬದಿಯ ರಸ್ತೆಯನ್ನು ಮುಚ್ಚಿ ವಾಹನಗಳ ಸಂಚಾರವನ್ನು ಇನ್ನೊಂದು ರಸ್ತೆಗೆ ಬದಲಿಸಿದ ಪರಿಣಾಮ ತಿರುವಿನಲ್ಲಿ ಈ ಅಪಘಾತ ಸಂಭವಿಸಿದೆ.
ಆಲ್ಟೋ ಕಾರು ಚಾಲಕ ಜಗದೀಶ್ ಆಚಾರ್ಯ ಹಾಗೂ ಬ್ರೀಝಾ ಕಾರಿನಲ್ಲಿ ಓರ್ವ ಮಹಿಳೆ, ಮಗು ಸೇರಿದಂತೆ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ರಸ್ತೆ ಅಗಲೀಕರಣವಾಗಿದ್ದರೂ ಅಂಗಡಿ ಮಾಲೀಕರೊಬ್ಬರು ಸೆಟ್ ಬ್ಯಾಕ್ ಬಿಡದ ಹಿನ್ನಲೆಯಲ್ಲಿ ಇಕ್ಕಟ್ಟಾದ ರಸ್ತೆಯಲ್ಲಿ ಪದೇಪದೇ ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ. ಈಗಾಗಲೇ ಮುನಿಯಾಲು ಪರಿಸರದಲ್ಲಿ 5ಕ್ಕೂ ಹೆಚ್ಚು ಸಣ್ಣಪುಟ್ಟ ಅಪಘಾತಗಳು ಸಂಭವಿಸಿದ್ದು, ವಾಹನಗಳ ಮಿತಿಮೀರಿದ ವೇಗ ಹಾಗೂ ನಿರ್ಲಕ್ಷö್ಯತನದ ಚಾಲನೆಯಿಂದ ಈ ಅಪಘಾತಗಳು ಸಂಭವಿಸುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಲೋಕೋಪಯೋಗಿ ಇಲಾಖೆ ಝಿಬ್ರಾ ಪಟ್ಟಿ ಹಾಗೂ ಬ್ಲಿಂಕರ್ ಗಳನ್ನು ಅಳವಡಿಸಿ ವಾಹನ ಅಪಘಾತಗಳನ್ನು ತಪ್ಪಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ