ಕಾರ್ಕಳ: ಮಂಗಳೂರು ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಅವಾಂತರದಿಂದ ಈಗಾಗಲೇ ಕಾರ್ಕಳ ತಾಲೂಕಿನ ಜನ ಹೈರಾಣಾಗಿದ್ದು,ಇದೀಗ ಭೂಸ್ವಾಧೀನ ಪ್ರಕ್ರಿಯೆ ವಿಚಾರದಲ್ಲಿ ಮತ್ತೆ ಗ್ರಾಮಸ್ಥರು ಪ್ರತಿಭಟನೆಗೆ ಮುಂದಾಗಿದ್ದಾರೆ.
ಕಾರ್ಕಳ ಬೈಪಾಸ್‌ನಿಂದ ಮಾಳ ಮುಳ್ಳೂರು ಗೇಟ್ ವರೆಗಿನ ರಾಷ್ಟ್ರೀಯ ಹೆದ್ದಾರಿ 169ರ ನಿರ್ಮಾಣಕ್ಕಾಗಿ ಅವೈಜ್ಞಾನಿಕ ಭೂಸ್ವಾಧೀನ ಪ್ರಕ್ರಿಯೆಯ ವಿರುದ್ಧ ಕಾರ್ಕಳ ತಾಲೂಕಿನ ಮಾಳ- ಮುಡಾರು-ಮಿಯ್ಯಾರು ಗ್ರಾಮಗಳ ಭೂ ಮಾಲಿಕರು ಅ 13 ರಂದು ಬಜಗೋಳಿಯ ಗಣಪತಿಕಟ್ಟೆ ಸಭಾ ಭವನದಲ್ಲಿ ಸಭೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಮಾರು 80 ಭೂಮಾಲೀಕರು ಈ ಅವೈಜ್ಞಾನಿಕ ರಾಷ್ಟ್ರೀಯ ಹೆದ್ದಾರಿ 169ರ ಯೋಜನೆಯಿಂದ ತಮ್ಮ ಕೃಷಿ ಭೂಮಿ, ವಾಸ್ತವ್ಯದ ಮನೆ, ಅಂಗಡಿಕೋಣೆ, ಜಾನುವಾರು ಹಟ್ಟಿ, ನೀರಾವರಿ ವ್ಯವಸ್ಥೆ, ಮೂಲಭೂತ ಸೌಲಭ್ಯಗಳನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ.
ಹೆದ್ದಾರಿ ಯೋಜನೆಗೆ ಸಂಬಂಧಪಟ್ಟ ಅಧಿಕಾರಿಗಳು ಭೂಮಾಲಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ, ಕೇವಲ ಕಾಟಾಚಾರಕ್ಕೆ ಸರ್ವೆ ಹಾಗೂ ಮೌಲ್ಯಮಾಪನ ಮಾಡಲಾಗಿದೆ ಹಾಗೂ ಪರಿಹಾರದ ಮೊತ್ತ ತೀರಾ ಕಡಿಮೆ ನಮೂದಿಸಿ ನೋಟೀಸ್ ನೀಡಿದ ಬಗ್ಗೆ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಅಗತ್ಯಬಿದ್ದಲ್ಲಿ ಉಗ್ರ ಹೋರಾಟದ ಮೂಲಕವೂ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಲಹೆ ವ್ಯಕ್ತವಾಯಿತು. ಸಾಣೂರು ರಾಷ್ಟ್ರೀಯ ಹೆದ್ದಾರಿ 169ರ ಹೋರಾಟ ಸಮಿತಿ ಪ್ರಮುಖರಾದ ಸಾಣೂರು ನರಸಿಂಹ ಕಾಮತ್ ಮಾತನಾಡಿ, ಹೆದ್ದಾರಿ ಯೋಜನೆಯ ಅವೈಜ್ಞಾನಿಕ ಸರ್ವೆಯ ಪರಿಣಾಮದಿಂದ ಭೂಮಾಲಿಕರಿಗೆ ಆಗುವ ನಷ್ಟದ ಬಗ್ಗೆ ಸವಿವರವಾಗಿ ತಿಳಿಸಿದರು.
ಬೆಳುವಾಯಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಹೋರಾಟ ಪ್ರಮುಖರಾದ ರತ್ನಾಕರ ಶೆಟ್ಟಿ ಬೆಳುವಾಯಿ ಇವರು ಕಾನೂನು ಪಾಲನೆ ಮಾಡದೇ ಪರಿಹಾರ ನೀಡುವಲ್ಲಿ ಲೋಪಗಳನ್ನು ವಿವರಿಸಿ ಹೋರಾಟಕ್ಕೆ ತಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಜಯರಾಂ ಪೂಜಾರಿ ಬೆಳುವಾಯಿ ತಮ್ಮ ಸಲಹೆ ನೀಡಿದರು. ಪದ್ಮನಾಭ ನಾಯ್ಕ ಮಾಳ, ಶ್ಯಾಮ ಶೆಟ್ಟಿ ಬಜಗೋಳಿ, ಮಾಧವ ಕಾಮತ್ ಮಿಯ್ಯಾರು, ಅಮಾದ್ ಮಿಯ್ಯಾರು, ಪಂ. ಸದಸ್ಯ ರಜತ್ ರಾಂಮೋಹನ್, ಪ್ರಶಾಂತ್ ಮುಡಾರು ವೇದಿಕೆಯಲ್ಲಿದ್ದರು. ಮಾಳ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ 169ರ ಹೋರಾಟಕ್ಕೆ ಸಂಘಟಿಸಿ ಬೆಂಬಲ ವ್ಯಕ್ತಪಡಿಸಿದ ರಾಜೇಶ್ ನ್ಯಾಕ್ ಮಾಳ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.