ಕಾರ್ಕಳ:ಮರ್ಣೆ ಗ್ರಾಮದ ಅಜೆಕಾರು ದೆಪ್ಪುತ್ತೆ ನಿವಾಸಿ ಬಾಲಕೃಷ್ಣ ಪೂಜಾರಿಯನ್ನು ಪ್ರಿಯಕರನ ಜೊತೆ ಸೇರಿ ಅಮಾನುಷವಾಗಿ ಹತ್ಯೆಗೈದ ಪ್ರಕರಣದಲ್ಲಿ ಜೈಲು ಸೇರಿದ್ದ ಪ್ರತಿಮಾಳಿಗೆ ಹೈಕೋರ್ಟ್ ಕೊನೆಗೂ ಷರತ್ತುಬದ್ದ ಜಾಮೀನು ನೀಡಿದೆ.
ಕಳೆದ 2024ರ ಅಕ್ಟೋಬರ್ 20ರಂದು ಬಾಲಕೃಷ್ಣ ಪೂಜಾರಿಯನ್ನು ಅವರ ಪತ್ನಿ ಪ್ರತಿಮಾ ಹಾಗೂ ಪ್ರಿಯಕರ ದಿಲೀಪ್ ಹೆಗ್ಡೆ ಉಸಿರುಗಟ್ಟಿಸಿ ಹತ್ಯೆ ಗೈದಿದ್ದರು. ಈ ಪ್ರಕರಣ ನಡೆದು 5 ದಿನಗಳ ಬಳಿಕ ದಿಲೀಪ್ ಹೆಗ್ಡೆ ಜೊತೆ ಸೇರಿ ತಾನೇ ಕೊಲೆಗೈದಿರುವುದಾಗಿ ಪ್ರತಿಮಾ ಸತ್ಯಾಂಶವನ್ನು ಕಕ್ಕಿದ್ದಳು.ಬಳಿಕ
ಅಕ್ಟೋಬರ್ 25ರಂದು ಅಜೆಕಾರು ಪೊಲೀಸ್ ಠಾಣೆಯ ಪೊಲೀಸರು ಪ್ರತಿಮಾ ಹಾಗೂ ದಿಲೀಪ್ ಹೆಗ್ಡೆಯನ್ನು ಬಂಧಿಸಿದ್ದರು. ಈ ಪೈಕಿ ಎ2 ಆರೋಪಿ ದಿಲೀಪ್ ಹೆಗ್ಡೆಗೆ ಕಳೆದ ಏಪ್ರಿಲ್ ನಲ್ಲಿ ಜಾಮೀನು ಮಂಜೂರಾಗಿತ್ತು.ಆದರೆ ಎ1 ಆರೋಪಿ ಪ್ರತಿಮಾಳ ಜಾಮೀನು ಅರ್ಜಿ ಪದೇಪದೇ ತಿರಸ್ಕೃತವಾಗಿತ್ತು.
ಪ್ರಿಯಕರ ದಿಲೀಪ್ ಹೆಗ್ಡೆ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಪತ್ನಿ ಪ್ರತಿಮಾ ಪೂಜಾರಿ ಗಂಡನಿಗೆ ಊಟದಲ್ಲಿ ನಿಧಾನ ವಿಷಪ್ರಾಶನ ಮಾಡಿ ಕೊಲ್ಲುವ ಸಂಚು ರೂಪಿಸಿದ್ದಳು. ಅದರೂ ಆತ ಚಿಕಿತ್ಸೆಯ ಪರಿಣಾಮ ಬದುಕುಳಿದ ಕಾರಣದಿಂದ ಆಸ್ಪತ್ರೆಯಿಂದ ಮನೆಗೆ ಮರಳಿದ ದಿನವೇ ಹತ್ಯೆಯಾಗಿತ್ತು. ಈ ಕೊಲೆ ಪ್ರಕರಣ
ಅತ್ಯಂತ ವಿಶೇಷ ಪ್ರಕರಣವಾಗಿದ್ದ ಹಿನ್ನೆಲೆಯಲ್ಲಿ ತನಿಖಾಧಿಕಾರಿ ಕಾರ್ಕಳ ವೃತ್ತ ನಿರೀಕ್ಷಕ ಮಂಜಪ್ಪ ಅವರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿ ಸೂಕ್ಷ್ಮ ಹಾಗೂ ಸಾಂದರ್ಭಿಕ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಅಂತಿಮವಾಗಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್(ಆರೋಪ ಪಟ್ಟಿ) ಸಲ್ಲಿಸಿದ್ದರು.
ಪ್ರಬಲ ಸಾಕ್ಷ್ಯಗಳ ಆಧಾರದಲ್ಲಿ ಅಧೀನ ನ್ಯಾಯಾಲಯಗಳು ಪ್ರತಿಮಾ ಪೂಜಾರಿ ಜಾಮೀನು ಅರ್ಜಿ ವಜಾಗೊಳಿಸಿದ್ದವು. ಈಕೆ ಜಾಮೀನಿಗಾಗಿ ಹೈಕೋರ್ಟ್ ಮೆಟ್ಟಿಲೇರಿದ್ದರೂ ಈ ಹಿಂದೆ ಜಾಮೀನು ಅರ್ಜಿ ತಿರಸ್ಕೃತವಾಗಿತ್ತು. ಅಂತಿಮವಾಗಿ ಹೈಕೋರ್ಟ್ ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿ ಕೊಲೆಗಾತಿ ಪ್ರತಿಮಾಳಿಗೆ ನಿರ್ದಿಷ್ಟ ಷರತ್ತುಗಳೊಂದಿಗೆ ಜಾಮೀನು ನೀಡಿದೆ.
ಒಟ್ಟಿನಲ್ಲಿ ಈ ಪ್ರಕರಣದಲ್ಲಿ ಇದೀಗ ಪ್ರತಿಮಾ ಪೂಜಾರಿ ಹಾಗೂ ದಿಲೀಪ್ ಹೆಗ್ಡೆ ಇಬ್ಬರಿಗೂ ಜಾಮೀನು ಸಿಕ್ಕಂತಾಗಿದೆ.