ಕಾರ್ಕಳ: ಮರ್ಣೆ ಗ್ರಾಮದ ಅಜೆಕಾರು ದೆಪ್ಪುತ್ತೆ ಎಂಬಲ್ಲಿನ ಸರ್ಕಾರಿ ಜಾಗದಲ್ಲಿನ ಸುಮಾರು 30ಕ್ಕೂ ಅಧಿಕ ಮರ ಕಡಿದು ಸಾಗಾಟ ಮಾಡಿದ್ದಾರೆ ಎಂಬ ಸಾರ್ವಜನಿಕರ ದೂರಿನ ಮೇರೆಗೆ ಮರದ ವ್ಯಾಪಾರಿ ಅಬ್ದುಲ್ ಗಫೂರ್ ಎಂಬವರ ವಿರುದ್ಧ ಕಾರ್ಕಳ ವಲಯ ಅರಣ್ಯಾಧಿಕಾರಿಗಳು ಕೇಸ್ ದಾಖಲಿಸಿದ್ದಾರೆ.
ಸ್ಥಳೀಯರ ದೂರಿನ ಮೇರೆಗೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಕಡಿದ ಮರದ ಬೊಡ್ಡೆಗಳನ್ನು ಪರಿಶೀಲಿಸಿ ಮರಗಳ ಅಂದಾಜು ಮೌಲ್ಯದ ಮಾಹಿತಿ ಸಂಗ್ರಹಿಸಿದ್ದಾರೆ. ಈ ಕುರಿತು ಕಾರ್ಕಳ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್ ಮಾಹಿತಿ ನೀಡಿದ್ದು, ಕಳೆದ ಮಳೆಗಾಲದಲ್ಲಿ ಈ ಮರಗಳನ್ನು ಕಡಿಯಲಾಗಿದ್ದು, ಸ್ಥಳೀಯರು ಹಾಗೂ ಸಾರ್ವಜನಿಕರು ಮಾಹಿತಿ ನೀಡದ ಹಿನ್ನಲೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿರಲಿಲ್ಲ. ಸುಮಾರು 20 ಮರಗಳನ್ನು ಕಡಿಯಲಾಗಿದ್ದು, ಸರ್ಕಾರಿ ಜಾಗದಲ್ಲಿ ಮರ ಕಡಿದಿರುವ ದೂರಿನ ಹಿನ್ನಲೆಯಲ್ಲಿ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದಾರೆ. ಅಕ್ರಮವಾಗಿ ಮರ ಕಡಿದು ಸಾಗಾಟ ಮಾಡಿದ ಆರೋಪದಲ್ಲಿ ಮರದ ವ್ಯಾಪಾರಿ ಅಬ್ದುಲ್ ಗಫೂರ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದಿದ್ದಾರೆ.
K