ಕಾರ್ಕಳ: ಅಜೆಕಾರು ಸಹಕಾರಿ ಸಂಘದ 68ನೇ ವಾರ್ಷಿಕ ಮಹಾಸಭೆಯು ಸೆ.20 ರಂದು ಶುಕ್ರವಾರ ಅಜೆಕಾರು ರಾಮ ಮಂದಿರದಲ್ಲಿ ನಡೆಯಿತು.
ಮಹಾಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಶಾಂತಿರಾಜ್ ಜೈನ್ ವಹಿಸಿ ಮಾತನಾಡಿ 2023-24ನೇ ಸಾಲಿನಲ್ಲಿ ಸಂಘವು ರೂ. 173.14ಕೋಟಿ ವ್ಯವಹಾರ ನಡೆಸಿ, ರೂ. 96.83ಲಕ್ಷ ನಿವ್ವಳ ಲಾಭ ಗಳಿಸಿದೆ. ಸಂಘ ಗಳಿಸಿದ ಲಾಭದಲ್ಲಿ ಸದಸ್ಯರಿಗೆ ಶೇ.12ರಷ್ಟು ಲಾಭಾಂಶ ವಿತರಿಸಲಾಗುವುದು ಎಂದು ಹೇಳಿದರು.
ಗೃಹ ಸಾಲ,ವಾಹನ ಸಾಲ,ವ್ಯಾಪಾರ ಸಾಲವನ್ನು ಒಂದು ವಾರದೊಳಗೆ ಮಂಜೂರು ಮಾಡಲಾಗುತ್ತದೆ.ಸದಸ್ಯರು ಇದರ ಪ್ರಯೋಜನ ಪಡೆಯಬಹುದು ಎಂದರು.
ಸಂಘದ ಸಿಬಂದಿಯವರ ಸೇವಾ ಮನೋಭಾವ, ಸದಸ್ಯರ ಜತೆ ಉತ್ತಮ ಸಂವಹನ, ಸದಸ್ಯರ ಸೂಕ್ತ ಸಲಹೆ ಸೂಚನೆ ಸಹಕಾರದಿಂದ ಸಂಘ ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದ್ದು ಶಿರ್ಲಾಲು ಶಾಖೆಯ ನೂತನ ಕಟ್ಟಡ ಉದ್ಘಾಟನೆ ಶೀಘ್ರದಲ್ಲಿ ನಡೆಯಲಿದೆ ಎಂದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮತ ಶೆಟ್ಟಿ ವಾರ್ಷಿಕ ವರದಿ ಮಂಡಿಸಿ ಮಾತನಾಡಿ ಸಂಘಕ್ಕೆ
ಸತತ 14 ವರ್ಷಗಳಿಂದ ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಉತ್ತಮ ಸಹಕಾರಿ ಸಂಘ ಪ್ರಶಸ್ತಿ ಪಡೆಯುತ್ತಿದೆ ಎಂದರು.
ಸಂಘವು ರೂ. 1.86 ಕೋಟಿ ಪಾಲು ಬಂಡವಾಳ ಹೊಂದಿದ್ದು, ರೂ. 24.94 ಕೋಟಿ ಠೇವಣಿ ಸಂಗ್ರಹಿಸಿದೆ ಎಂದರು.
ಮುಂದಿನ ಯೋಜನೆಗಳು: 2023-24ನೇ ಸಾಲಿನಲ್ಲಿ ಸಂಘವು ಕೆಲವು ಪ್ರಮುಖ ಯೋಜನೆಗಳನ್ನು ಹಮ್ಮಿಕೊಂಡಿದ್ದು, ವಾರ್ಷಿಕ ರೂ. 200 ಕೋಟಿ ಮೀರಿ ವ್ಯವಹಾರದ ಗುರಿ, ವಿವಿಧ ಠೇವಣಿ ಯೋಜನೆಗಳ ಮೂಲಕ ಠೇವಣಿಯನ್ನು ರೂ. 30 ಕೋಟಿ ತಲುಪುವಂತೆ ಕಾರ್ಯಯೋಜನೆ ರೂಪಿಸುವುದು, ಹೆಚ್ಚು ಸದಸ್ಯರಿಗೆ ಸಾಲ ಸೌಲಭ್ಯ ಹಾಗೂ ಸರಳ ದಾಖಲೆಗಳನ್ನು ಪಡೆದು ಹೆಚ್ಚಿನ ಮೊತ್ತದ ಸಾಲವನ್ನು ಒದಗಿಸುವುದು, ಶಿರ್ಲಾಲು ಗ್ರಾಮದಲ್ಲಿ ಸಂಘದ ಶಾಖೆಗೆ ಖರೀದಿಸಿದ ನಿವೇಶನದಲ್ಲಿ ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದ್ದು ಶೀಘ್ರ ಪೂರ್ಣಗೊಳಿಸುವುದು, ಸಂಘದ ಕಾರ್ಯವ್ಯಾಪ್ತಿಯ ಶಾಲಾ ಕಾಲೇಜು ವಿಧ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಯೋಜನೆ ಸಂಘ ಒಳಗೊಂಡಿದೆ.
ನಿವೃತ್ತ ಸಿಬ್ಬಂದಿಗೆ ಸಮ್ಮಾನ: ಸಂಘದಲ್ಲಿ ಹಲವು ವರ್ಷಗಳಿಂದ ಸಿಬಂದಿ ಯಾಗಿ ಸೇವೆ ಸಲ್ಲಿಸಿ ನಿವೃತರಾದ ಸತೀಶ್ ನಾಯಕ್ ದಂಪತಿಯನ್ನು ಸಂಘದ ವತಿಯಿಂದ ಸಮ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಸಂಘದ ಎಲ್ಲಾ ನಿರ್ದೇಶಕರು ಹಾಜರಿದ್ದರು.
ಈ ಸಂದರ್ಭದಲ್ಲಿ ಕ್ಯಾಂಪ್ಕೋ ನಿರ್ದೇಶಕ ದಯಾನಂದ ಹೆಗ್ಡೆ,ಎಪಿಎಂಸಿ ಮಾಜಿ ಅಧ್ಯಕ್ಷ ಮುಟ್ಲುಪಾಡಿ ಸತೀಶ್ ಶೆಟ್ಟಿ, ಹರೀಶ್ ನಾಯಕ್,ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಶೋಭಾ ಶೆಟ್ಟಿ, ನಂದಕುಮಾರ್ ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷರಾದ ಪ್ರಶಾಂತ್ ಶೆಟ್ಟಿ ಸ್ವಾಗತಿಸಿ,
ಅರುಣ್ ಹೆಗ್ಡೆ ವಂದಿಸಿದರು.
in