ಕಾರ್ಕಳ: ಎಟಿಎಂ ನಿಂದ ಹಣ ತೆಗೆಯಲು ಬಂದಿದ್ದ ಮಹಿಳೆಗೆ ಸಹಾಯ ಮಾಡುವ ನೆಪದಲ್ಲಿ ಆಕೆಯ ಎಟಿಎಂ ಕಾರ್ಡ್ ಹಾಗೂ ಪಿನ್ ನಂಬರ್ ಪಡೆದು ಬರೋಬ್ಬರಿ 1 ಲಕ್ಷ ಲಪಟಾಯಿಸಿದ ಪ್ರಕರಣ ಅಜೆಕಾರಿನಲ್ಲಿ ನಡೆದಿದೆ.
ಅಜೆಕಾರು ನಿವಾಸಿ ಹೆನ್ರಿ ಡಿಸೋಜ ಅವರ ಪತ್ನಿ ಮೇರಿ ಎಂಬವರು ವಂಚನೆಗೊಳಗಾದ ಮಹಿಳೆ. ಅವರು ಸೆ.16 ರಂದು ಸಂಜೆ 5.45 ರ ಸುಮಾರಿಗೆ ಅಜೆಕಾರಿನ ಕರ್ನಾಟಕ ಬ್ಯಾಂಕ್ATM ಗೆ ತಮ್ಮ ಬ್ಯಾಂಕ್ ಖಾತೆಯಿಂದ ಹಣವನ್ನು ಡ್ರಾ ಮಾಡಲು ಹೋಗಿದ್ದರು. ಇದೇವೇಳೆ ಅಲ್ಲಿ ನಿಂತಿದ್ದ ಇಬ್ಬರು ತಾವು ನಿಮಗೆ ಸಹಾಯ ಮಾಡುವುದಾಗಿ ಹೇಳಿದಾಗ ಮೇರಿಯವರು ತಮ್ಮಲ್ಲಿದ್ದ ATM ಕಾರ್ಡ್ ಹಾಗೂ ಪಿನ್ ಅಪರಿಚಿತರಿಗೆ ನೀಡಿದ್ದರು. ಕಾರ್ಡ್ ಪಡೆದ ವಂಚಕರು ಹಣ ಡ್ರಾ ಮಾಡುವಂತೆ ನಟಿಸಿ ಕೊನೆಗೆ ಹಣ ಬರುತ್ತಿಲ್ಲವೆಂದು ಹೇಳಿ ಮೇರಿಯವರಿಗೆ ಬದಲಿ ATM ಕಾರ್ಡ್ ನೀಡಿದ್ದರು. ವಂಚಕರ ಮೋಸದ ಕುರಿತು ಅರಿಯದ ಮೇರಿಯವರು ನಕಲಿ ಕಾರ್ಡ್ ಪಡೆದು ಮನೆಗೆ ಮರಳಿದ್ದರು. ಇತ್ತ ಮೇರಿಯವರ ಕಾರ್ಡ್ ಹಾಗೂ ಪಿನ್ ನಂಬರ್ ಪಡೆದ ವಂಚಕರು ಕಾರ್ಕಳದ ಬ್ಯಾಂಕ್ ಆಫ್ ಬರೋಡಾದ ATM ನಿಂದ ತಲಾ10 ಸಾವಿರದಂತೆ 10 ಬಾರಿ ಒಟ್ಟು 1 ಲಕ್ಷ ರೂಪಾಯಿ ಡ್ರಾ ಮಾಡಿ ವಂಚಿಸಿದ್ದಾರೆ ಎಂದು ಮೇರಿ ಡಿಸೋಜ ಅವರ ಪತಿ ಹೆನ್ರಿ ಡಿಸೋಜ ಅಜೆಕಾರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದು, ವಂಚಕರ ಬಂಧನಕ್ಕೆ ಬಲೆಬೀಸಿದ್ದಾರೆ
in