ಕಾರ್ಕಳ: ಅಜೆಕಾರು ಮರ್ಣೆ ಗ್ರಾಮದ ಗುಡ್ಡೆಯಂಗಡಿ ಶ್ರಿಮತಿ ಶಾರದಾ ಭಟ್ ಮತ್ತು ಶ್ರೀಧರ ಭಟ್ ಸ್ಮರಣಾರ್ಥ ಅವರ ಪುತ್ರ ವಿದ್ವಾನ್ ವೇದಮೂರ್ತಿ ರಾಘವೇಂದ್ರ ಭಟ್ ಇವರು 4 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿರುವ ತೆರೆದ ಬಾವಿ ಹಾಗೂ ಕೊಳವೆ ಬಾವಿಯನ್ನು ಮರ್ಣೆ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಲಾಯಿತು.
ಬಾವಿಯನ್ನು ಪಂಚಾಯಿತಿಗೆ ಹಸ್ತಾಂತರಿಸಿ ಮಾತನಾಡಿದ ರಾಘವೇಂದ್ರ ಭಟ್,ನನಗೆ ಎನ್ನುವುದು ಸಲ್ಲದು ನಮಗೆ ಎಂಬ ಸಾಮಾಜಿಕ ಒಗ್ಗಟ್ಟು ಸಾರುವ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಾವು “ನನಗಾಗಿ’ ಬದುಕುವುದಕ್ಕಿಂತ “ನಮಗಾಗಿ” ಬದುಕಿದಾಗ ಸಮಾಜ ನಮ್ಮನ್ನು ಸದಾ ನೆನೆಯುತ್ತದೆ. ಈ ಹಿನ್ನೆಲೆ ನಮಗೆ ಸಾಮಾಜಿಕ ತುಡಿತ ಇರುವುದು ಅಗತ್ಯ. ನಾವು ಸಂಪಾದಿಸಿದ ಸಂಪನ್ಮೂಲದಲ್ಲಿ ಸ್ವಲ್ಪವಾದರೂ ಸಮಾಜಕ್ಕೆ ಬೇಕಾದ ಇಂತಹ ಶಾಶ್ವತ ಕೊಡುಗೆಗಳನ್ನು ನೀಡಿದಲ್ಲಿ ಪರಮಾತ್ಮನು ಸಂತೃಪ್ತನಾಗುವುದರಲ್ಲಿ ಸಂಶಯವಿಲ್ಲ.
ಆರೋಗ್ಯಕರ ನೀರನ್ನು ಕಾಪಾಡಿಕೊಳ್ಳುವುದು ಮಾನವ ಜೀವನಕ್ಕೆ ನಿರ್ಣಾಯಕವಾಗಿದೆ.
ಜನರು ನೈರ್ಮಲ್ಯ ನೀರನ್ನು ಕುಡಿಯಲು ಸಾಧ್ಯವಾಗದಿದ್ದಾಗ, ಅದು ದೇಹದ ಮೇಲೆ ತಕ್ಷಣದ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ ಎಂದರು.
ಮರ್ಣೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರಭಾವತಿ ನಾಯಕ್ ಮಾತನಾಡಿ, ಅಂತರ್ಜಲ ಕುಸಿಯುತ್ತಿರುವ ಕಾರಣ ಬೇಸಿಗೆಯಲ್ಲಿ ನೀರನ್ನು ಮಿತವಾಗಿ ಬಳಸಿ, ಅಲ್ಲದೆ ಯಾವುದೇ ಪ್ರಚಾರ ಬಯಸದೇ ಸದಾ ಸಮಾಜ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರು ವಿದ್ವಾನ್ ರಾಘವೇಂದ್ರ ಭಟ್ಟರು ನಮಗೆಲ್ಲಾ ಮಾದರಿ ಎಂದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಸ್ಮರಣೆಕೆಯನ್ನು ನೀಡಿ ಶಾಲು ಹೊದಿಸಿ ಸನ್ಮಾನಿಸಲಾಯಿತು.
ತಾ.ಪಂ ಮಾಜಿ ಉಪಾಧ್ಯಕ್ಷ ಹರೀಶ್ ನಾಯಕ್, ರತ್ನಾಕರ ಅಮೀನ್, ಗ್ರಾ.ಪಂ ಪಂ ಅಭಿವೃದ್ಧಿ ಅಧಿಕಾರಿ ತಿಲಕ್ ರಾಜ್, ಅರುಂಧತಿ, ಜಗನ್ನಾಥ ಶೆಟ್ಟಿ, ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗ, ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ನಂದ ಕುಮಾರ್ ಹೆಗ್ಡೆ ನಿರೂಪಿಸಿ ವಂದಿಸಿದರು.