ನವದೆಹಲಿ: ತನನ್ನು ವಜಾಗೊಳಿಸುವ ಅಧಿಕಾರ ಯುಪಿಎಸ್ ಸಿಗೆ ಇಲ್ಲ ಎಂದು ದರ್ಪ ತೋರಿದ್ದ ಮಾಜಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರನ್ನು ತಕ್ಷಣವೇ ಜಾರಿಗೆ ಬರುವಂತೆ ಕೇಂದ್ರ ಸರಕಾರ ಅವರನ್ನು ಭಾರತೀಯ ಆಡಳಿತ ಸೇವೆಯಿಂದ ವಜಾಗೊಳಿಸಿದೆ.
ತಮ್ಮ ಹೆಸರು ಸೇರಿದಂತೆ ಇತರ ಹಿಂದುಳಿದ ವರ್ಗಗಳು ಮತ್ತು ಅಂಗವೈಕಲ್ಯ ಕೋಟಾ ಪ್ರಯೋಜನಗಳನ್ನು ಯಪಿಎಸ್ ಸಿ ಪರೀಕ್ಷೆ ಪಾಸಾಗಲು ಬಳಸಿದ್ದರು, ಈ ಆರೋಪದಲ್ಲಿ ತಪ್ಪಿತಸ್ಥರೆಂದು ಕಂಡುಬಂದಿದೆ. ಆಕೆಯ ಉಮೇದುವಾರಿಕೆಯನ್ನು ರದ್ದುಗೊಳಿಸಿದ ನಂತರ, ಯುಪಿಎಸ್‌ಸಿ ಆಕೆಯನ್ನು ಜೀವನ ಪರ್ಯಂತ ಪ್ರವೇಶ ಪರೀಕ್ಷೆ ತೆಗೆದುಕೊಳ್ಳದಂತೆ ನಿರ್ಬಂಧಿಸಿತ್ತು.
34 ವರ್ಷದ ಪೂಜಾ ಖೇಡ್ಕರ್ ಅವರು ತಮ್ಮ ಖಾಸಗಿ ಆಡಿ ಕಾರಿನಲ್ಲಿ ಅನಧಿಕೃತವಾಗಿ ಬೀಕನ್ ಅನ್ನು ಬಳಸುವುದರ ಜೊತೆಗೆ ಪ್ರತ್ಯೇಕ ಕಚೇರಿ ಮತ್ತು ಅಧಿಕೃತ ಕಾರಿಗೆ ಬೇಡಿಕೆಯ ಆರೋಪದ ಬಳಿಕ ವಿವಾದಕ್ಕೆ ಸಿಲುಕಿದ್ದರು. ಬಳಿಕ ಆಕೆಯ ಮಾಹಿತಿಗಳನ್ನು ಪರಿಶೀಲನೆ ನಡೆಸಿದ ವೇಳೆ ಈಕೆ ಮೋಸ ಮಾಡಿ ಐಎಎಸ್ ಅಧಿಕಾರಿಯಾಗಿರುವುದು ಕಂಡು ಬಂದಿತ್ತು.
ಖೇಡ್ಕರ್ ಅವರು ಸೇವೆಯಲ್ಲಿ ತನ್ನ ಆಯ್ಕೆಯನ್ನು ಖಚಿತಪಡಿಸಿಕೊಳ್ಳಲು ವಂಚನೆ ಮತ್ತು ಇತರ ಹಿಂದುಳಿದ ವರ್ಗಗಳು (OBC) ಮತ್ತು ಅಂಗವಿಕಲ ಕೋಟಾ ಪ್ರಯೋಜನಗಳನ್ನು ತಪ್ಪಾಗಿ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಆದಾಗ್ಯೂ ಆಕೆ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ.
ಇದೀಗ ಕೇಂದ್ರವು, ಸೆಪ್ಟೆಂಬರ್ 6, 2024 ರ ಆದೇಶದ ಪ್ರಕಾರ, IAS (ಪ್ರೊಬೇಷನ್) ನಿಯಮಗಳು, 1954 ರ ನಿಯಮ 12 ರ ಅಡಿಯಲ್ಲಿ ತಕ್ಷಣವೇ ಜಾರಿಗೆ ಬರುವಂತೆ ಖೇಡ್ಕರ್ ಅವರನ್ನು ಭಾರತೀಯ ಆಡಳಿತ ಸೇವೆಯಿಂದ ವಜಾಗೊಳಿಸಿದೆ. ಯುಪಿಎಸ್‌ಸಿ ಜುಲೈ 31 ರಂದು ಆಕೆಯ ಉಮೇದುವಾರಿಕೆಯನ್ನು ರದ್ದುಗೊಳಿಸಿ ಮುಂದಿನ ಪರೀಕ್ಷೆಗಳಿಂದ ಆಕೆಯನ್ನು ಡಿಬಾರ್ ಮಾಡಿದೆ. ಸದ್ಯ ಜಾಮೀನಿನ ಮೇಲೆ ಇರುವ ಪೂಜಾ ಅವರು ಯಾವುದೇ ಕ್ಷಣದಲ್ಲಿ ಜೈಲು ಸೇರುವ ಸಾಧ್ಯತೆ ಇದೆ.