ಬೆಂಗಳೂರು: ಹಾಸನ ಜಿಲ್ಲೆಯ ಸಕಲೇಶಪುರ-ಬಾಳುಪೇಟೆ ಮಾರ್ಗದ ಅಚ್ಚಂಗಿಯಲ್ಲಿ ಭೂಕುಸಿತ ಸಂಭವಿಸಿದ್ದು, ದುರಸ್ತಿ ಕಾರ್ಯ ನಡೆಯುತ್ತಿರುವ ಕಾರಣ ಬೆಂಗಳೂರು-ಮಂಗಳೂರು ನಡುವಿನ ರೈಲು ಸಂಚಾರವನ್ನು ಅನಿರ್ದಿಷ್ಟಾವಧಿವರೆಗೆ ರದ್ದುಗೊಳಿಸಲಾಗಿದೆ.
ವಾರದ ಹಿಂದೆ ಭೂಕುಸಿತ ಸಂಭವಿಸಿದ ಪ್ರದೇಶವ್ಯಾಪ್ತಿಯಲ್ಲೇ ಮತ್ತೆ ಹಳಿಗಳ ಮೇಲೆ ಗುಡ್ಡ ಕುಸಿದಿದ್ದು, ಆಗಸ್ಟ್ 18 ಮತ್ತು 19 ರಂದು ಈ ಮಾರ್ಗದಲ್ಲಿ ಸಂಚರಿಸಬೇಕಿದ್ದ ಮುರ್ಡೇಶ್ವರ-ಎಸ್ಎಂವಿಟಿ ಬೆಂಗಳೂರು, ಎಸ್ಎಂವಿಟಿ ಬೆಂಗಳೂರು-ಮುರ್ಡೇಶ್ವರ ರೈಲುಗಳನ್ನು ರದ್ದುಪಡಿಸಲಾಗಿದೆ. ಕೆಎಸ್ಆರ್ ಬೆಂಗಳೂರು-ಕಾರವಾರ, ಕಾರವಾರ-ಕೆಎಸ್ಆರ್ ಬೆಂಗಳೂರು, ಕೆಎಸ್ಆರ್ ಬೆಂಗಳೂರು-ಕಣ್ಣೂರು, ಕಣ್ಣೂರು-ಕೆಎಸ್ಆರ್ ಬೆಂಗಳೂರು, ವಿಜಯಪುರ-ಮಂಗಳೂರು ಸೆಂಟ್ರಲ್ ರೈಲುಗಳನ್ನು ರದ್ದುಪಡಿಸಲಾಗಿದೆ. ಆಗಸ್ಟ್ 19 ರಂದು ಯಶವಂತಪುರ-ಕಾರವಾರ, ಆಗಸ್ಟ್ 20 ರಂದು ಕಾರವಾರ-ಯಶವಂತಪುರ, ಆಗಸ್ಟ್ 19 ಮತ್ತು 20 ರಂದು ಮಂಗಳೂರು ಸೆಂಟ್ರಲ್-ವಿಜಯಪುರ ರೈಲು ಸೇವೆಗಳನ್ನು ರದ್ದುಪಡಿಸಲಾಗಿದೆ ಎಂದು ನೈಋತ್ಯ ರೈಲ್ವೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಗುಡ್ಡ ಕುಸಿತ ಪ್ರದೇಶದಲ್ಲಿ ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಕಾರ್ಯಾಚರಣೆ ಇನ್ನೂ ಎರಡು ದಿನಗಳ ಕಾಲ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಭೂಕುಸಿತ ಸಂಭವಿಸಿರುವ ಪ್ರದೇಶದಲ್ಲಿ ಅಂತರ್ಜಲ ಉಕ್ಕುತ್ತಿರುವುದರಿಂದ ಮತ್ತಷ್ಟು ಭೂಕುಸಿತದ ಭಯ ಕಾಡುತ್ತಿದೆ. ಇದರಿಂದಾಗಿ ಅನಿರ್ದಿಷ್ಟಾವಧಿಯವರೆಗೆ ಈ ಮಾರ್ಗದ ಎಲ್ಲ ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ.
`