ಕಾರ್ಕಳ: ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಮತ್ತು ಆಂತರಿಕ ಗುಣಮಟ್ಟ ಭರವಸಾ ಕೋಶದ ವತಿಯಿಂದ ಮಾದಕ ವಸ್ತು ವಿರೋಧಿ ಮತ್ತು ಜಾಗೃತಿ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಪ್ರಮಾಣ ವಚನವನ್ನು ಬೋಧಿಸುವುದರೊಂದಿಗೆ ನಡೆಯಿತು.
ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಕಾರ್ಕಳ ನಗರ ಠಾಣೆಯ ಠಾಣಾಧಿಕಾರಿ ಮುರಳೀಧರ ನಾಯ್ಕ್ ಅವರು,ಸಮಾಜದಲ್ಲಿ ಗುರುಗಳನ್ನು ಸೃಷ್ಟಿ ಮಾಡಿರುವುದು ವಿದ್ಯಾರ್ಥಿಗಳು ಸರಿ ದಾರಿಯಲ್ಲಿ ಮುನ್ನಡೆಯುವಂತೆ ಮಾಡಲು.ಅವರ ಹಿತವಚನ, ಕಾಳಜಿ, ಪ್ರೀತಿ ವಿದ್ಯಾರ್ಥಿಗಳ ಪಾಲಿಗೆ ಸದಾ ನೆರಳಾಗುತ್ತದೆ.
ಡ್ರಗ್ಸ್ ಕುರಿತ ಜಾಗ್ರತಿಯು ಬಹು ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಯಾಕೆಂದರೆ,ಯುವಕರು ಮಾದಕ ವಸ್ತುಗಳ ವ್ಯಸನಿಗಳಾಗಿ ಅನ್ಯ ದಾರಿಗೆ ಹೋಗಬಾರದೆಂಬ ಕಳಕಳಿಯೇ ಇದರ ಮೂಲ ಉದ್ದೇಶ. ಓದುವ ವಯಸ್ಸಲ್ಲಿ ಓದದೆ, ಕೆಟ್ಟ ಚಟಗಳಿಗೆ ದಾಸರಾದರೆ, ಭವಿಷ್ಯದಲ್ಲಿ ತುಂಬ ಕಷ್ಟಪಡಬೇಕಾಗುತ್ತದೆ. ಒಳ್ಳೆಯವರ ಸಹವಾಸವನ್ನು ಮಾಡಬೇಕಾದ ಬದ್ಧತೆ ನಮಗಿರಬೇಕು. ನಿಧಾನಕ್ಕೆ ನಶೆಯೇರಿಸುವ ಪದಾರ್ಥಗಳನ್ನು ವಿದ್ಯಾರ್ಥಿ ಸಮೂಹ ಬಳಸದೇ ಇರುವಂತೆ ಬಹಳ ಜಾಗರೂಕರಾಗಬೇಕು. ದೇಶದ ಭವ್ಯ ಪರಂಪರೆ ಬೆಳೆಯುವುದು ನಾಲ್ಕು ಗೋಡೆಗಳ ನಡುವೆ. ಗುರುವಿನ ಮಾರ್ಗದರ್ಶನವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳುವತ್ತ ಗಮನ ಹರಿಸಬೇಕು. ಆಧುನಿಕ ತಂತ್ರಜ್ಞಾನದಲ್ಲಿ ಬೆರಳ ತುದಿಯಲ್ಲಿ ಇರುವಾಗ,ದೈಹಿಕವಾಗಿ ಮನಸಿಕವಾಗಿ ಕುಗ್ಗಿಸುವ ಇಂತಹ ಚಟುವಟಿಕೆಗಳಿಗೆ ಮಾರಕವಾಗುವ ಡ್ರಗ್ಸ್ ನಂತಹ ಅಭ್ಯಾಸಗಳನ್ನು ಬದುಕಿಗೆ ತರಬಾರದು ಎನ್ನುತ್ತಾ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಡಾ.ಮಂಜುನಾಥ ಎ.ಕೋಟ್ಯಾನ್ ಮಾತನಾಡಿ ಜಗತ್ತಿನ ಎಲ್ಲ ದೇಶಗಳನ್ನು ಗಮನಿಸಿದರೆ,ನಮ್ಮ ದೇಶದಲ್ಲಿ ಅತೀ ಹೆಚ್ಚಿನ ಯುವ ಸಮಾಜ ಇದೆ. ಯುವ ಸಮಾಜವೇ ಕೆಟ್ಟದರ ದಾಸರಾಗುತ್ತಾ ಇರುವುದು ಖೇದಕರವಾಗಿದೆ. ವಿದ್ಯಾರ್ಥಿಗಳಲ್ಲಿ ನಿಮ್ಮ ಅಭ್ಯಾಸಗಳು ಸರಿ ಇಲ್ಲದೆ ಹೋದರೆ ತುಂಬ ದೊಡ್ಡ ಅನಾಹುತಕ್ಕೆ ಅದು ಕಾರಣವಾಗಬಲ್ಲುದು. ಬೆಳೆದು ಬಂದ ದಾರಿ,ತಂದೆ ತಾಯಿಯರ ಮುಖ,ನಿಮ್ಮ ಮನದಾಳದಲ್ಲಿ ಸದಾ ಕಾಲವೂ ಇರಬೇಕು.
ಇವತ್ತು ಗ್ರಾಮೀಣ ಮಟ್ಟಕ್ಕೂ ಈ ಮಾದಕ ವಸ್ತುಗಳ ನಶೆ ತಲುಪಿದೆಯೆಂದರೆ ಅದು ಆತಂಕ ಪಡುವ ವಿಷಯವಾಗಿದೆ. ಅತೀ ಸುಲಭವಾಗಿ ಸಂಪಾದನೆಯಾಗುವ ಯಾವುದರ ಆಸೆಗೂ ಬಲಿ ಬೀಳಬಾರದು ಎಂದರು.
ವೇದಿಕೆಯಲ್ಲಿ ಐಕ್ಯೂಎಸಿ ಸಂಯೋಜಕರಾದ ಪ್ರೊ.ಲಕ್ಷ್ಮೀನಾರಾಯಣ ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ.ಈಶ್ವರ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಎಲ್ಲರನ್ನೂ ಸ್ವಾಗತಿಸಿದರು. ಪ್ರೊ.ಶಂಕರ್ ಕುಡ್ವ ಕಾರ್ಯಕ್ರಮ ನಿರೂಪಿಸಿ, ಸಹ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ.ನಂದಕಿಶೋರ್ ವಂದಿಸಿದರು.