
ನವದೆಹಲಿ,ನ,26: ಭಾರತೀಯ ಸೇನೆಯು ಜಾತಿ, ಧರ್ಮವನ್ನು ಮೀರಿ ದೇಶದ ರಕ್ಷಣೆಗಾಗಿ ನಿಂತಿದೆ. ಹಾಗಾಗಿ, ಸೈನಿಕರು ಜಾತಿ-ಧರ್ಮ, ಭಾಷೆ ಎನ್ನುವುದನ್ನೆಲ್ಲ ಮರೆತು ಕೇವಲ ದೇಶಪ್ರೇಮ ಮತ್ತು ಕರ್ತವ್ಯವನ್ನೇ ಉಸಿರಾಗಿಸಿ ರಾಷ್ಟ್ರವನ್ನು ಕಾಯುತ್ತಾರೆ. ಆದರೆ ದೇವಸ್ಥಾನದ ಗರ್ಭಗುಡಿಗೆ ಪ್ರವೇಶ ಮಾಡಲು ನಿರಾಕರಿಸಿದ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ಸೈನಿಕನೊರ್ವನ ಅಮಾನತ್ತಿನ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದ್ದು, “ಸೇನೆಯು ಜಾತ್ಯತೀತ ಸಂಸ್ಥೆಯಾಗಿದೆ” ಎಂದು ಖಡಕ್ ಆದೇಶ ನೀಡಿದೆ.
ಏನಿದು ವಿವಾದ..?
2017ರಲ್ಲಿ ಸೇನೆಗೆ ಸೇರಿದ್ದ ಲೆಫ್ಟಿನೆಂಟ್ ಕರ್ನಲ್ ಸ್ಯಾಮ್ಯುಯೆಲ್ ಕಮಲೇಶ್ (3 ಕ್ಯಾವಲ್ರಿ ರೆಜಿಮೆಂಟ್) ಅವರ ತಂಡದಲ್ಲಿ ಹೆಚ್ಚಿನವರು ಸಿಖ್ ಸೈನಿಕರು. ರೆಜಿಮೆಂಟ್ ವ್ಯಾಪ್ತಿಯಲ್ಲಿ ದೇವಾಲಯ ಮತ್ತು ಗುರುದ್ವಾರ ಇದ್ದರೂ ‘ಸರ್ವಧರ್ಮ ಸ್ಥಳ’ ಇರಲಿಲ್ಲ. ವಾರಕ್ಕೊಮ್ಮೆ ನಡೆಯುವ ಧಾರ್ಮಿಕ ಮೆರವಣಿಗೆಯ ವೇಳೆ, ಕಮಲೇಶ್ ತಮ್ಮ ಸೈನಿಕರೊಂದಿಗೆ ಆ ಸ್ಥಳಗಳಿಗೆ ಹೋಗುತ್ತಿದ್ದರೂ, ಕ್ರಿಶ್ಚಿಯನ್ ನಂಬಿಕೆಯ ಕಾರಣಕ್ಕೆ ಗರ್ಭಗುಡಿಗೆ ಪ್ರವೇಶಿಸಲು ನಿರಾಕರಿಸಿದರು. ಜೊತೆಗೆ ತಮ್ಮ ಧರ್ಮ ಏಕದೇವೋಪಾಸನೆ ಎಂದು ಹೇಳಿ ಒಳಗೆ ಪ್ರವೇಶಿಸುವುದು ತಮ್ಮ ನಂಬಿಕೆಗೆ ವಿರುದ್ಧವೆಂದು ಸೇನೆಯ ಆದೇಶ ಪಾಲಿಸಲು ನಿರಾಕರಿಸುತ್ತಿದ್ದರು. ಇದು ಘಟಕದ ಶಿಸ್ತಿಗೆ ಧಕ್ಕೆ ಎಂದು ಹಲವಾರು ಬಾರಿ ಆತನಿಗೆ ಸಲಹೆ ನೀಡಲಾಗಿದ್ದರೂ ಆತ ಆದೇಶ ಪಾಲಿಸಲು ನಿರಾಕರಿಸುತ್ತಿದ್ದ. ಇದರಿಂದ ಸೇನಾ ಮುಖ್ಯಸ್ಥರು ಆತನನ್ನು ಸೇನೆಯಿಂದ ವಜಾ ಮಾಡಿ ಆದೇಶಿಸಿದರು.
ಸೇನಾ ಮುಖ್ಯಸ್ಥರ ವಜಾ ಆದೇಶ ಪ್ರಶ್ನಿಸಿ ಸ್ಯಾಮ್ಯುಯೆಲ್ ಕಮಲೇಶ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠವು ಅಧಿಕಾರಿಯ ವರ್ತನೆಯನ್ನು ಅತ್ಯಂತ ಅಶಿಸ್ತಿನ ಕ್ರಿಯೆ ಎಂದು ಕರೆದು, “ಸೇನೆಯು ಜಾತ್ಯತೀತ ಸಂಸ್ಥೆಯಾಗಿದ್ದು, ಅದರ ಶಿಸ್ತಿನ ವ್ಯವಸ್ಥೆಯು ಯಾವುದೇ ರೀತಿಯ ರಾಜಿಗೆ ಒಳಪಡುವುದಿಲ್ಲ” ಎಂದು, ಆತನ ಅಮಾನತ್ತನ್ನ ಎತ್ತಿಹಿಡಿದಿದೆ.ಮುಂದುವರೆದು, ಸೇನೆಯ ಶಿಸ್ತಿನ ಮೌಲ್ಯಗಳು, ದೇಶಪ್ರೇಮ ಮತ್ತು ಒಗ್ಗಟ್ಟು ಅತ್ಯಂತ ಮಹತ್ವದ್ದಾಗಿದ್ದು, “ವೈಯಕ್ತಿಕ ಧಾರ್ಮಿಕ ನಂಬಿಕೆಗಳನ್ನು ಮೇಲ್ವಿಚಾರಣೆ ಮಾಡುವ ಹಕ್ಕು ಪ್ರತಿಯೊಬ್ಬರಿಗೂ ಇದ್ದರೂ, ಸಮವಸ್ತ್ರ ಧರಿಸಿದಾಗ ಶಿಸ್ತನ್ನೇ ಮೊದಲಿಗೆ ಇಡಬೇಕು” ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
.
