ಕಾರ್ಕಳ : ದಕ್ಷಿಣ ಆಫ್ರಿಕಾದ ಪೊಟ್‌ಶೆಪ್ಯೂಮ್‌ನಲ್ಲಿ ನಡೆದ ಏಷ್ಯಾ- ಪೆಸಿಫಿಕ್-ಆಫ್ರಿಕನ್ ಪವರ್‌ಲಿಫ್ಟಿಂಗ್ ಮತ್ತು ಬೆಂಚ್‌ಪ್ರೆಸ್ ಚಾಂಪಿಯನ್‌ಷಿಪ್ ಪಂದ್ಯಾವಳಿಯಲ್ಲಿ ಭಾರತವನ್ನು ಪ್ರತಿನಿಧಿಸಿದ ಕಾರ್ಕಳ ತಾಲೂಕಿನ ಬೋಳ ಗ್ರಾಮದ ಅಕ್ಷತಾ ಪೂಜಾರಿ ಚಿನ್ನದ ಪದಕ ಗೆದ್ದಿದ್ದಾರೆ. ಸೀನಿಯರ್ಸ್ ನ 52 ಕೆಜಿ ವಿಭಾಗದಲ್ಲಿ ಅಕ್ಷತಾ ಪೂಜಾರಿ ಬೋಳ ಅದ್ವಿತೀಯ ಸಾಧನೆಗೈದು ಚಿನ್ನದ ಪದಕ ಪಡೆದು ಭಾರತದ ಕೀರ್ತಿ ಪತಾಕೆಯನ್ನು ವಿಶ್ವ ಮಟ್ಟದಲ್ಲಿ ಹಾರಿಸಿದ್ದಾರೆ.
ಆರಂಭದಲ್ಲಿ ವಾಲಿಬಾಲ್ ಪಂದ್ಯಾಟದಲ್ಲಿ ತನ್ನನ್ನು ತೊಡಗಿಸಿಕೊಂಡ ಅಕ್ಷತಾ ಬಳಿಕ ಪವರ್‌ಲಿಫ್ಟಿಂಗ್ ಕ್ಷೇತ್ರದಲ್ಲಿ ಸಾಧನೆಗೈದು ಸಾಕಷ್ಟು ಪ್ರಶಸ್ತಿಗಳನ್ನು ಗಳಿಸಿದ್ದಾರೆ.
ದೇಶೀಯ ಹಾಗೂ ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಅಕ್ಷತಾ ಕಾಮನ್‌ವೆಲ್ತ್ ಕೂಟ ಮತ್ತು ಏಷ್ಯನ್ ಗೇಮ್ಸ್ ನಲ್ಲಿ ಹಲವು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಅಕ್ಷತಾ ಪೂಜಾರಿಯವರ ಕ್ರೀಡಾ ಸಾಧನೆ ಗುರುತಿಸಿ ಸರ್ಕಾರ ಅವರಿಗೆ ಏಕಲವ್ಯ ಪ್ರಶಸ್ತಿ ನೀಡಿ ಗೌರವಿಸಿದೆ.
ಅಕ್ಷತಾ ಪೂಜಾರಿ ಪ್ರಸ್ತುತ ನವಮಂಗಳೂರು ಬಂದರಿನಲ್ಲಿ ಉದ್ಯೋಗಿಯಾಗಿದ್ದಾರೆ