ಕಾರ್ಕಳ: ಪ್ರಧಾನಿ ಮೋದಿ, ಶಾ ನೇತೃತ್ವದ ಬಿಜೆಪಿ ರಾಜ್ಯದಲ್ಲಿ ಮೂಡಾ ಮತ್ತು ವಾಲ್ಮಿಕಿ ನಿಗಮ ಪ್ರಕರಣವನ್ನು ನೆಪವಾಗಿಸಿ ರಾಜ್ಯಪಾಲರನ್ನು ಬಳಸಿಕೊಂಡು ಕೇಂದ್ರೀಯ ತನಿಖಾ ಸಂಸ್ಥೆಗಳ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಬಂಧಿಸಿ ರಾಜ್ಯ ಸರಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ನಡೆಸುತ್ತಿರುವುದು ಖಂಡನೀಯ. ದೇಶದ ಪ್ರಜಾತಂತ್ರ ವ್ಯವಸ್ಥೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಇದು ಮುಂದಿನ ದಿನಗಳಲ್ಲಿ ದೇಶವ್ಯಾಪಿ ಮಹತ್ತರ ಜನಪರ ಕ್ರಾಂತಿಯೊAದಕ್ಕೆ ಕಾರಣವಾದೀತು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹೇಳಿದೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಪಾದಿಸಿದ ಸಂವಿಧಾನದ ಆಶಯದಂತೆ ಸರಕಾರದ ಸೌಲಭ್ಯಗಳನ್ನು ತಾರತಮ್ಯ ಭ್ರಷ್ಟಾಚಾರ ರಹಿತವಾಗಿ ಜನರಿಗೆ ತಲಪಿಸಬಲ್ಲ ಒಬ್ಬ ನಿರ್ಭಿಡೆಯ ಜನಪರ ಆಡಳಿತಗಾರ. ಮೂಡಾ ಪ್ರಕರಣದಲ್ಲಿ ಸರಕಾರವೇ ನೇಮಿಸಿದ ಮಾಜಿ ನ್ಯಾಯಮೂರ್ತಿ ನೇತೃತ್ವದ ಏಕ ಸದಸ್ಯ ಪೀಠದ ಆಯೋಗ ವಿಚಾರಣೆ ನಡೆಸುತ್ತಿದ್ದರೆ ವಾಲ್ಮೀಖಿ ನಿಗಮದ ಹಗರಣವನ್ನು ಸರಕಾರದ ವಿಶೇಷ ತನಿಖಾ ದಳ ತನಿಖೆ ನಡೆಸುತ್ತಿದೆ. ಆದಾಗ್ಯೂ ಈ ಪ್ರಕರಣಗಳಲ್ಲಿ ಕೇಂದ್ರೀಯ ಸ್ವಾಯತ್ತ ಸಂಸ್ಥೆಗಳು ಮೂಗು ತೂರಿಸುತ್ತಿರುವುದು ಈ ದೇಶದ ಸಂವಿಧಾನದತ್ತ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ.
ರಾಜ್ಯದಲ್ಲಿ ಬಿಜೆಪಿ ಆಡಳಿತಾವಧಿಯಲ್ಲಿ ಮೊಟ್ಟೆ ಹಗರಣವೂ ಸೇರಿ ಹಲವು ಪ್ರರಕರಣಗಳ ದೂರಿನ ಬಗ್ಗೆ ಸ್ಪಂದಿಸದ ರಾಜ್ಯಪಾಲರು ಮುಡಾ ಪ್ರಕರಣದ ಬಗ್ಗೆ ಹೇಗೆ ಸ್ಪಂದಿಸಿದರು ಎನ್ನುವುದು ಯಕ್ಷ ಪ್ರಶ್ನೆಯೇನಲ್ಲ. ಅದೇನಿದ್ದರೂ ಸ್ವಾಯತ್ತತೆ ಇದೆ ಎಂದ ಮಾತ್ರಕ್ಕೆ ಸ್ವಾಯತ್ತ ಸಂಸ್ಥೆಗಳಾಗಲೀ ರಾಜ್ಯಪಾಲರೇ ಆಗಲಿ ಸಂವಿಧಾನ ಕೊಡಮಾಡಿದ ನಿಗದಿತ ಹೊಣೆಗಾರಿಕೆಯಡಿಯಲ್ಲಿ ಕಾರ್ಯನಿರ್ವಹಿಸದೆ ಇದ್ದಾಗ ಅವರು ಪ್ರಶ್ನಾತೀತರಾಗಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಹೇಳಿದೆ.
ರಾಜ್ಯದಲ್ಲಿ ಮಳೆಯ ರೌದ್ರ ತಾಂಡವ ಜನರನ್ನು ಬಲಿತೆಗೆದುಕೊಳ್ಳುತ್ತಿದೆ. ನೆರೆಯಿಂದ ಕೃಷಿ ನಾಶವಾಗಿ ರೈತ ದಿಕ್ಕೆಟ್ಟಿದ್ದಾನೆ. ಒಂದು ಪ್ರತಿಪಕ್ಷವಾಗಿ ಮನೆಮಠ ಕಳೆದುಕೊಂಡ ಜನರಿಗೆ ಸಾಂತ್ವನ ಹೇಳಬೇಕಿದ್ದ ಬಿಜೆಪಿ ನಾಯಕರು ತಮ್ಮ ಸ್ವಾರ್ಥಸಾಧನೆಗಾಗಿ ಒಂದು ಕಡೆ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಸರಕಾರದ ಮೇಲೆ ಛೂಬಿಟ್ಟು ಮತ್ತೊಂದು ಕಡೆ ಜನರ ದಿಕ್ಕು ತಪ್ಪಿಸಲು ಮೆರವಣಿಗೆ ಹೊರಟಿದ್ದಾರೆ. ಇದು ಬಿಜೆಪಿಯ ಸಂಸ್ಕೃತಿ. ವಾಜಪೇಯಿ, ಅಡ್ವಾನಿ ಯವರಂತಹ ಮಹಾನಾಯಕರು ಕಟ್ಟಿಬೆಳೆಸಿದ ಬಿಜೆಪಿ ಇಂದಿನ ನಾಯಕರ ಸ್ವಾರ್ಥಸಾಧನೆಯ ಭ್ರಷ್ಟ ರಾಜಕೀಯಕ್ಕೆ ಬಲಿಯಾಗಿ ಅಧಪಥನಗೊಂಡು ತನ್ನ ಅಸ್ಥಿತ್ವ ಕಳದುಕೊಳ್ಳುವ ದಿನ ದೂರವಿಲ್ಲ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ಬಿಪಿನ್ ಚಂದ್ರಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
`