
ಕಾರ್ಕಳ, ಏ.13: ಕಳೆದ ಹಲವು ವರ್ಷಗಳಿಂದ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಕುಡಿಯುವ ನೀರಿನ ಬವಣೆ ಕಡಿಮೆಯಾಗಿದೆ. ಆದರೂ ಹಲವೆಡೆ ಬೇಸಗೆಯ ಆರಂಭದಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ಉಲ್ಬಣಿಸುತ್ತಿದ್ದು, ಜಲಕ್ಷಾಮವನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಎಲ್ಲಾ ಪಂಚಾಯತ್ ಪಿಡಿಓ ಹಾಗೂ ಆಡಳಿತಾಧಿಕಾರಿಗಳು ಪರಸ್ಪರ ಸಮನ್ವಯತೆ ಸಾಧಿಸಿ ಲಭ್ಯವಿರುವ ನೀರಿನ ಮೂಲಗಳನ್ನು ಬಳಸಿ ಜನರಿಗೆ ಕುಡಿಯುವ ನೀರಿನ ಯಾವುದೇ ವ್ಯತ್ಯಯವಾಗದಂತೆ ಅಗತ್ಯ ಕ್ರಮಕೈಗೊಳ್ಳುವಂತೆ ಶಾಸಕ ಸುನಿಲ್ ಕುಮಾರ್ ಸೂಚಿಸಿದರು.
ಅವರು ಏ.13ರಂದು ಸೋಮವಾರ ಕಾರ್ಕಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಅಧಿಕಾರಿಗಳ ಸಭೆ ಕರೆದು ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಚರ್ಚಿಸಿದರು. ಈಗಾಗಲೇ ಕುಡಿಯುವ ನೀರಿಗಾಗಿ ಹೆಬ್ರಿ ತಾಲೂಕಿನಲ್ಲಿ 2 ಹಾಗೂ ಕಾರ್ಕಳ ತಾಲೂಕಿನಲ್ಲಿ 29 ಕಾಮಗಾರಿ ಸೇರಿ 31 ಕಾಮಗಾರಿಗಳಿಗೆ ಒಟ್ಟು 1.01 ಕೋ.ರೂ ಯೋಜನೆಯ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಮುಂದಿನ 7 ವಾರಗಳು ಅತ್ಯಂತ ನಿರ್ಣಾಯಕವಾಗಿದ್ದು, ಕುಡಿಯುವ ನೀರು ನಿರ್ವಹಣೆ ಕುರಿತು ಅಧಿಕಾರಿಗಳು ಪೂರ್ವತಯಾರಿ ನಡೆಸಬೇಕು. ಪಂಚಾಯತಿಗಳು ಬೇಸಿಗೆಯಲ್ಲಿ ನೀರಿನ ಅಭಾವ ಇರುವ ಕಡೆಗಳಲ್ಲಿ ನೀರು ಬಿಡುವ ನಿಗದಿತ ಸಮಯದ ಕುರಿತು ಜನರಿಗೆ ಮೊದಲೇ ಮಾಹಿತಿ ನೀಡಬೇಕು. ಇದಲ್ಲದೇ ಬೇಸಿಗೆಯ ಸಂದರ್ಭದಲ್ಲಿ ಕುಡಿಯುವ ನೀರನ್ನು ಕೃಷಿ ಬಳಕೆಗೆ ನಿರ್ಬಂಧ ವಿಧಿಸಬೇಕು, ಕುಡಿಯುವ ನೀರಿನ ಸಮಸ್ಯೆ ಎದುರಾದಾಗ ಖಾಸಗಿಯವರಿಂದ ನೀರು ಪಡೆಯುವ ವಿಚಾರವಾಗಿ ಅಧಿಕಾರಿಗಳು ಮೊದಲೇ ಸಿದ್ಧತೆ ಮಾಡಿಟ್ಟುಕೊಳ್ಳುವಂತೆ ಸೂಚಿಸಿದರು.
ಮುದ್ರಾಡಿಯ ಬಲ್ಲಾಡಿಯಲ್ಲಿ ನೀರಿನ ಸಮಸ್ಯೆಯಿದ್ದು ತುರ್ತಾಗಿ ಕೊಳವೆ ಬಾವಿ ವ್ಯವಸ್ಥೆ ಬೇಕಿದೆ ಎಂದು ಪಿಡಿಓ ಸಭೆಗೆ ತಿಳಿಸಿದರು. ಇನ್ನಾ ಗ್ರಾಮದ ಕಡೆಕುಂಜದಲ್ಲಿನ 75 ಮನೆಗಳಿಗೆ ಕುಡಿಯುವ ನೀರಿನ ಸಮಸ್ಯೆಯಿದೆ ಎಂದು ಪಿಡಿಓ ಸಭೆಗೆ ತಿಳಿಸಿದರು. ಶಿವಪುರ ಗ್ರಾಮದ ಯಳಗೋಳಿ, ಯಡ್ಜೆ ಪ್ರದೇಶಗಳಿಗೆ ನೀರಿನ ಸಮಸ್ಯೆ ಎದುರಾಗಿದ್ದು, ಸೂಕ್ತ ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ಇನ್ನುಳಿದಂತೆ ಮಿಯ್ಯಾರು ಗ್ರಾಮದ ಬೋರ್ಕಟ್ಟೆ,ಗುಂಡಾಜೆಯಲ್ಲಿ ಸ್ವಲ್ಪಮಟ್ಟಿಗೆ ನೀರಿನ ಸಮಸ್ಯೆಯಿದೆ ಎಂದು ಪಿಡಿಓ ಶಾಸಕರ ಗಮನಕ್ಕೆ ತಂದರು, ಮಿಯ್ಯಾರು ಹಾಗೂ ಕುಕ್ಕುಂದೂರು ಗ್ರಾಮಗಳಿಗೆ ಮುಂಡ್ಲಿ ಜಲಾಶಯದಿಂದ ತಾತ್ಕಾಲಿಕವಾಗಿ ನೀರು ಪೂರೈಕೆಗೆ ಕ್ರಮ ವಹಿಸುವಂತೆ ಶಾಸಕರು ಸೂಚಿಸಿದು. ನಿಟ್ಟೆ ಗ್ರಾಮದ ಪದವು, ಕುಡಾರಿಕು ಪರಿಸರದಲ್ಲಿ ನೀರಿನ ಸಮಸ್ಯೆಯಿದೆ ಎಂದು ಪಿಡಿಓ ಸಭೆಯ ಗಮನಕ್ಕೆ ತಂದರು.
ನೀರಿನ ತೀವೃ ಕ್ಷಾಮ ಇದ್ದ ಕಡೆಗಳಲ್ಲಿ ಖಾಸಗಿಯವರನ್ನು ವಿಶ್ವಾಸಕ್ಕೆ ಪಡೆದು ಕುಡಿಯುವ ನೀರಿನ ಸಮಸ್ಯೆ ಎದುರಾದಂತೆ ಕ್ರಮ ವಹಿಸಬೇಕೆಂದು ಶಾಸಕ ಸುನಿಲ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಹೆಬ್ರಿ ತಹಶೀಲ್ದಾರ್ ಎ.ಎಸ್ ಪ್ರಸಾದ್, ಕಾರ್ಕಳ ತಹಶೀಲ್ದಾರ್ ಪ್ರದೀಪ್ ಕುಮಾರ್., ತಾ.ಪಂ ಇಒ ಪ್ರಶಾಂತ ರಾವ್ ಉಪಸ್ಥಿತರಿದ್ದರು.

















.
.
.
.
.
.
.
.
.
.
