ಬೆಂಗಳೂರು: ಕರ್ನಾಟಕದಾದ್ಯಂತ ವಕ್ಫ್ ಆಸ್ತಿ ನೋಟಿಸ್ ಜಾರಿ ಮಾಡಿರುವುದು ರೈತರಲ್ಲಿ ಆತಂಕ ಹುಟ್ಟಿಸಿದ್ದು ಇದೀಗ ಈ ವಿವಾದ ಕೇಂದ್ರಕ್ಕೆ ತಲುಪಿದೆ. ಈ ಹಿನ್ನಲೆಯಲ್ಲಿ ವಕ್ಫ್ ಕಾಯ್ದೆ ತಿದ್ದುಪಡಿಗೆ ಜಗದಾಂಬಿಕಾ ಪಾಲ್ ನೇತೃತ್ವದ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ನವೆಂಬರ್ 6 ಮತ್ತು 7ರಂದು ಕರ್ನಾಟಕಕ್ಕೆ ಭೇಟಿ ನೀಡಲಿದೆ.
ಜೆಪಿಸಿ ಸಮಿತಿಯ ಸದಸ್ಯರಾಗಿರುವ ಸಂಸದ ತೇಜಸ್ವಿ ಸೂರ್ಯ ಅವರು ಈ ಹಿಂದೆ ಜಗದಾಂಬಿಕಾ ಪಾಲ್ ಅವರಿಗೆ ಪತ್ರ ಬರೆದು ರಾಜ್ಯದ ರೈತರ ಕುಂದುಕೊರತೆಗಳನ್ನು ಆಲಿಸುವಂತೆ ಸಮಿತಿಯನ್ನು ಒತ್ತಾಯಿಸಿದ್ದರು. ಅವರ ಮನವಿಯ ಮೇರೆಗೆ ಸಮಿತಿಯು ಬುಧವಾರ ಮತ್ತು ಗುರುವಾರ ವಿಜಯಪುರ ಮತ್ತು ಬೆಂಗಳೂರಿಗೆ ಭೇಟಿ ನೀಡುವ ನಿರೀಕ್ಷೆಯಿದೆ.
ರಾಜ್ಯದ ಕೆಲ ಜಿಲ್ಲೆಗಳಲ್ಲಿ ರೈತರ ಆರ್‌ಟಿಸಿ ಮತ್ತು ಸರ್ಕಾರಿ ಶಾಲೆಯ ಆರ್‌ಟಿಸಿ ಯಲ್ಲಿಯೂ ವಕ್ಫ್ ಹೆಸರು ನಮೂದಾಗಿದೆ. ವಿಜಯಪುರದಲ್ಲಿ 400 ಕ್ಕೂ ಹೆಚ್ಚು ರೈತರಿಗೆ ವಕ್ಫ್ ನೋಟಿಸ್ ಬಂದಿವೆ ಎಂದು ತೇಜಸ್ವಿ ಸೂರ್ಯ ಮಾಹಿತಿ ನೀಡಿದ್ದಾರೆ. ಬಸವಣ್ಣನವರ ಕಾಲದಿಂದಲೂ ದೇವಾಲಯಗಳಿಗೆ ವಕ್ಫ್ ನೋಟಿಸ್ ನೀಡುವುದರ ನ್ಯಾಯಸಮ್ಮತತೆಯನ್ನು ಪ್ರಶ್ನಿಸಿದ ಅವರು, ಈ ಕೆಲವು ಸ್ಥಳಗಳು ಇಸ್ಲಾಂ ಸ್ಥಾಪನೆಯಾಗುವ ಮೊದಲೇ ಅಸ್ತಿತ್ವದಲ್ಲಿದ್ದವು ಎಂದು ಸಲಹೆ ನೀಡಿದ್ದಾರೆ.