Share this news

  ಬೆಂಗಳೂರು,ಸೆ.05: ನಗರ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ EVM ಮತಯಂತ್ರದ ಬದಲು ಬ್ಯಾಲೆಟ್ ಬಳಕೆ ಹಾಗೂ ರಾಜ್ಯ ಚುನಾವಣಾ ಆಯೋಗದ ನೇತೃತ್ವದಲ್ಲಿ ಪ್ರತ್ಯೇಕ ಮತದಾರರ ಪಟ್ಟಿ ಸಿದ್ಧಪಡಿಸಲು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಮುಂದಾಗಿದೆ.

ಈ ಕುರಿತು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಣಯವನ್ನು ಕೈಗೊಳ್ಳಲಾಗಿದೆ.
ಬಿಜೆಪಿ ಹಾಗೂ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಮತಕಳ್ಳತನದ ಆರೋಪ ಹೊರಿಸಿರುವ ಲೋಕಸಭಾ ವಿಪಕ್ಷ ನಾಯಕ ರಾಹುಲ್‌ಗಾಂಧಿ ದೇಶವ್ಯಾಪಿ ಹೋರಾಟ ನಡೆಸುತ್ತಿ‌ರುವ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಸರ್ಕಾರ EVM ಬದಲಿಗೆ ಬ್ಯಾಲೆಟ್ ಪೇಪರ್ ಬಳಸಲು ಮುಂದಾಗಿದ್ದು, ಕೇಂದ್ರ ಸರ್ಕಾರದ ವಿರುದ್ಧ ಸೆಡ್ಡು ಹೊಡೆದಿದೆ.
ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್, ‌ಗ್ರೇಟರ್‌ ಬೆಂಗಳೂರು ಪ್ರಾಧಿಕಾರವೂ ಸೇರಿದಂತೆ ಎಲ್ಲಾ ಸ್ತರದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಹೊಸ ಮತದಾರರ ಪಟ್ಟಿ ಸಿದ್ಧಪಡಿಸಲು ರಾಜ್ಯ ಚುನಾವಣಾ ಆಯೋಗಕ್ಕೆ ಅಧಿಕಾರ ನೀಡಲು ಸರ್ಕಾರ ತೀರ್ಮಾನಿಸಿದೆ ಎಂದರು.
ಮತದಾರರ ಪಟ್ಟಿ ಪರಿಷ್ಕರಿಸಿ, ಹೊಸ ಪಟ್ಟಿ ತಯಾರಿಸಲು ಕಾಯ್ದೆಗೆ ಅಗತ್ಯ ತಿದ್ದುಪಡಿಗಳನ್ನು ಮಾಡಿ ಹೊಸ ನಿಯಮಾವಳಿಗಳನ್ನು ರೂಪಿಸಲಾಗುವುದು,ಈ ಕುರಿತು ಇನ್ನು 15 ದಿನಗಳಲ್ಲಿ ನಿಯಮಗಳನ್ನು ಅಂತಿಮಗೊಳಿಸಿ ಸುಗ್ರೀವಾಜ್ಞೆ ಹೊರಡಿಸಲಾಗುವುದು ಎಂದು ಸಚಿವ ಪಾಟೀಲ್ ಹೇಳಿದರು.
ಕೇಂದ್ರ ಚುನಾವಣಾ ಆಯೋಗ ತಯಾರಿಸಿರುವ ಮತದಾರರ ಪಟ್ಟಿಯಲ್ಲಿ ವ್ಯಾಪಕ ಅಕ್ರಮವಾಗಿದೆ. ಮತ ಕಳ್ಳತನವಾಗಿದೆ ಎಂಬ ಆರೋಪ ಕೇಳಿಬಂದಿದೆ. ಇತ್ತೀಚೆಗೆ ಕರ್ನಾಟಕದಲ್ಲೂ ಮತದಾರರ ಪಟ್ಟಿಯಲ್ಲಿ ಬಹು ದೊಡ್ಡ ಅಕ್ರಮ ಆಗಿದೆ ಎಂದು ಜನರು ದೂರಿದ್ದಾರೆ. ಮತದಾರ ಅಲ್ಲದವರನ್ನೂ ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ. ಮತಕಳ್ಳತನ ವಿಚಾರವಾಗಿ ವ್ಯಾಪಕ ಚರ್ಚೆ ನಡೆಯುತ್ತಿದೆ ಎಂದು ಅವರು ವಿವರಿಸಿದರು.
ದೇಶದಲ್ಲಿ EVM (ವಿದ್ಯುನ್ಮಾನ ಮತ ಯಂತ್ರದ) ಬಗ್ಗೆಯೂ ಜನರಲ್ಲಿ ವಿಶ್ವಾಸವಿಲ್ಲ. ಅದರ ವಿಶ್ವಾಸಾರ್ಹತೆಯ ಕೊರತೆಯನ್ನು ಗಮನಿಸಿ, ನಾವು ಜನರ ಮನಃಸ್ಥಿತಿಗೆ ಅನುಗುಣವಾಗಿ ಇವಿಎಂ ಬದಲು ಬ್ಯಾಲೆಟ್‌ ವ್ಯವಸ್ಥೆ ಜಾರಿ ತರಲು ತೀರ್ಮಾನಿಸಿದ್ದೇವೆ’ ಎಂದು ಹೇಳಿದರು.
ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್‌.ಸಂಗ್ರೇಶಿ ಅವರು ಗ್ರೇಟರ್‌ ಬೆಂಗಳೂರು ಆಡಳಿತ ಕಾಯ್ದೆ 2024ರ ಸೆಕ್ಷನ್‌ 35 ಅನ್ನು ಉಲ್ಲೇಖಿಸಿ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದರು. ಅದರ ಆಧಾರದ ಮೇರೆಗೆ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಪಂಚಾಯತ್‌ರಾಜ್‌ ಕಾಯ್ದೆ, ಮುನಿಸಿಪಾಲಿಟಿ ಕಾಯ್ದೆಯಲ್ಲೂ ಈ ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ, ಕೇಂದ್ರ ಚುನಾವಣಾ ಆಯೋಗದಂತೆ ರಾಜ್ಯ ಚುನಾವಣಾ ಆಯೋಗವೂ ಸ್ವಾಯತ್ತ ಸಂಸ್ಥೆಯಾಗಿದೆ. ಕೇಂದ್ರ ಚುನಾವಣಾ ಆಯೋಗದಷ್ಟೇ ರಾಜ್ಯ ಚುನಾವಣಾ ಆಯೋಗಕ್ಕೂ ಅಧಿಕಾರ ಇದೆ. ಮತದಾರರ ಪಟ್ಟಿಯನ್ನೂ ಸ್ವತಂತ್ರವಾಗಿ ತಯಾರಿಸಬಹುದಾಗಿದೆ ಎಂದು ಸಚಿವ ಎಚ್ .ಕೆ ಪಾಟೀಲ್ ಹೇಳಿದರು.

 

 

 

 

 

 

 

  

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

  

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *