Share this news

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ಈರಾಕೋಡಿ ಎಂಬಲ್ಲಿ ಪಿಕಪ್ ಚಾಲಕ ಅಬ್ದುಲ್ ರಹಿಮಾನ್ ( 32) ಹತ್ಯೆ ಮತ್ತು ಖಲಂದರ್ ಶಾಫಿ ಮೇಲಿನ ಕೊಲೆಯತ್ನ ಪ್ರಕರಣ‌ ಕುರಿತಂತೆ ಸ್ಥಳೀಯರಾದ ದೀಪಕ್,ಸುಮಿತ್ ಸೇರಿ 15 ಮಂದಿಯ ವಿರುದ್ಧ ಬಂಟ್ವಾಳ‌ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಬ್ದುಲ್ ರಹಿಮಾನ್ ಮತ್ತು ಖಲಂದರ್ ಶಾಫಿ ಅವರು ನದಿಯಿಂದ ಪಿಕಪ್ ವಾಹನದಲ್ಲಿ ಮರಳು ಲೋಡ್ ಮಾಡಿ ಕುರಿಯಾಳ ಗ್ರಾಮದ ಈರಾ ಕೋಡಿಯ ರಾಜೀವಿ ಎಂಬವರ ಮನೆ ಬಳಿ ಇಳಿಸುವ ಸಮಯ ಪರಿಚಯಸ್ಥರಾದ ದೀಪಕ್, ಸುಮಿತ್ ಮತ್ತು 15 ಮಂದಿ ಏಕಾಏಕಿ ಚಾಲಕನ ಸೀಟಿನಲ್ಲಿದ್ದ ಅಬ್ದುಲ್ ರಹಿಮಾನ್ ಅವರನ್ನು ಹೊರಗೆ ಎಳೆದು ತಲವಾರು ಹಾಗೂ ಚೂರಿಯಿಂದ ತಿವಿದು ಹತ್ಯೆ ಮಾಡಲಾಗಿದೆ. ಈ ಸಂದರ್ಭದಲ್ಲಿ ತಡೆಯಲು ಹೋದಾಗ ಶಾಫಿಯವರಿಗೂ ಗಾಯಗಳಾಗಿವೆ. ಈ ವೇಳೆ ಅಲ್ಲಿದ್ದವರು ಬೊಬ್ಬೆ ಹಾಕಿದ್ದರಿಂದ ಹಲ್ಲೆ ಮಾಡಿದ ಆರೋಪಿಗಳು ಮಾರಕಾಸ್ತ್ರಗಳೊಂದಿಗೆ ಪರಾರಿಯಾಗಿದ್ದಾರೆ. ಹಲ್ಲೆಗೈದವರ ಪೈಕಿ ಇಬ್ಬರು ಪರಿಚಯಸ್ಥರು ಎಂದು ಹಲ್ಲೆಗೊಳಗಾಗಿ ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಕಲಂದರ್ ಶಾಫಿ ಮಾಹಿತಿ ನೀಡಿದ್ದಾರೆ ಎಂದು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದ ಮುಹಮ್ಮದ್ ನಿಸಾರ್ ಎಂಬವರು ಬಂಟ್ಬಾಳ ಗ್ರಾಮೀಣ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿಗಳ ಪತ್ತೆ 5 ಪೊಲೀಸ್ ತಂಡ ರಚನೆ:

ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ಈರಾಕೋಡಿ ಎಂಬಲ್ಲಿ ಕೊಳತಮಜಲು ಜುಮ್ಮಾ ಮಸೀದಿ ಕಾರ್ಯದರ್ಶಿ ಹಾಗೂ ಪಿಕಪ್ ಚಾಲಕ ಅಬ್ದುಲ್ ರಹಿಮಾನ್ ( 32) ಹತ್ಯೆ ಮತ್ತು ಕಲಂದರ್ ಶಾಫಿ ಮೇಲಿನ ಕೊಲೆಯತ್ನ ಪ್ರಕರಣ‌ಲ್ಲಿ ಆರೋಪಿಗಳ ಬಂಧನಕ್ಕಾಗಿ ಡಿವೈಎಸ್ಪಿ ವಿಜಯ ಪ್ರಕಾಶ್ ನೇತೃತ್ವದಲ್ಲಿ 5 ಪೊಲೀಸ್ ತಂಡಗಳು ರಚಿಸಲಾಗಿದೆ ಎಂದು ತಿಳಿದು ಬಂದಿದೆ.

ಸದ್ಯ ಪ್ರಕರಣ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಡಿವೈಎಸ್ಪಿ ನೇತೃತ್ವದಲ್ಲಿ ಆರೋಪಿಗಳ ಮಾಹಿತಿ ಕಲೆಹಾಕಲಾಗಿದೆ ಎನ್ನಲಾಗಿದೆ. ಈ ಕಾರ್ಯಾಚರಣೆಯನ್ನು ಮಂಗಳೂರು ನಗರ ಸಿಸಿಬಿ ತಂಡ ಮತ್ತು ಬಂಟ್ವಾಳ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ ಜಂಟಿಯಾಗಿ ನಡೆಸಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

 

 

 

 

Leave a Reply

Your email address will not be published. Required fields are marked *