Share this news

ಬೆಳ್ತಂಗಡಿ: ಬೆಳಾಲು ನಿವಾಸಿ ನಿವೃತ್ತ ಶಿಕ್ಷಕ ಎಸ್ ಪಿ ಬಾಲಕೃಷ್ಣ ಭಟ್ (83) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾ ನಿವಾಸಿ ಜ್ಯೋತಿಷಿಯಾಗಿರುವ ರಾಘವೇಂದ್ರ ಕೆದಿಲಾಯ (53) ಹಾಗೂ ಆತನ ಪುತ್ರ ಮುರಳೀಕೃಷ್ಣ (20) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಈ ಕೊಲೆ ನಡೆದಿದ್ದು, ಮೃತ ಬಾಲಕೃಷ್ಣ ಭಟ್ ಅವರ ಮಗಳ ಗಂಡ ಹಾಗೂ ಮೊಮ್ಮಗ (ಮಗಳ ಮಗ) ಸೇರಿ‌ ಹತ್ಯೆ ಮಾಡಿರುವುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

ಧರ್ಮಸ್ಥಳ ಪೊಲೀಸರು ಸಿ.ಸಿ ಕ್ಯಾಮೆರಾಗಳು, ಮೊಬೈಲ್ ಲೊಕೇಶನ್ ಸೇರಿದಂತೆ ವಿವಿಧ ಆಯಾಮಗಳಲ್ಲಿ ನಡೆಸಿದ ತನಿಖೆಯಲ್ಲಿ ಆರೋಪಿಗಳನ್ನು ಮೂರು ದಿನಗಳಲ್ಲಿ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಇಬ್ಬರು ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ.

ಬೆಳಾಲಿನಲ್ಲಿ ಆ.20ರಂದು ಮಧ್ಯಾಹ್ನ ಸುಮಾರಿಗೆ ನಿವೃತ್ತ ಶಿಕ್ಷಕ ಎಸ್.ಪಿ ಬಾಲಕೃಷ್ಣ ಬಡೆಕ್ಕಿಲ್ಲಾಯ ಅವರನ್ನು ಅವರ ಮನೆಯ ಅಂಗಳದಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಕೊಲೆ ನಡೆದ ರೀತಿ ಹಾಗೂ ಮನೆಯಲ್ಲಿ ಯಾವುದೇ ಕಳ್ಳತನ‌ ನಡೆಯದಿರುವುದನ್ನು ಗಮನಿಸಿದ ಪೊಲೀಸರು ಇದು ಪರಿಚಿತರಿಂದಲೇ ನಡೆದ ಕೃತ್ಯ ಎಂಬ ಅನುಮಾನಕ್ಕೆ ಬಂದಿದ್ದರು. ಅದಕ್ಕೆ ಪೂರಕವಾಗಿ ಊಟ ಮಾಡಿ ಎಸೆದಿದ್ದ ಎರಡು ಎಲೆಗಳು ಅಲ್ಲಿ ಕಂಡು ಬಂದಿದ್ದವು. ಈ ಹಿನ್ನಲೆಯಲ್ಲಿ ಬಾಲಕೃಷ್ಣ ಬಡೆಕ್ಕಿಲ್ಲಾಯ ಅವರ ಸಂಬಂಧಿಕರನ್ನು ಕೇಂದ್ರೀಕರಿಸಿ ತನಿಖೆ ನಡೆಸಿದಾಗ ಕೊಲೆ ಪ್ರಕರಣದ ಹಿನ್ನಲೆ ಬಹಿರಂಗಗೊಂಡಿದೆ.

ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಮಾರ್ಗದರ್ಶನದಲ್ಲಿ, ಬಂಟ್ವಾಳ ಡಿ.ವೈ.ಎಸ್.ಪಿ ವಿಜಯ ಪ್ರಸಾದ್ ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ಅವರ ನೇತೃತ್ವದಲ್ಲಿ ಪೊಲೀಸರು ತನಿಖೆ ನಡೆಸಿದ್ದರು.

ನಿವೃತ್ತ ಶಿಕ್ಷಕ ಬಾಲಕೃಷ್ಣ ಬಡೆಕಿಲ್ಲಾಯ ಅವರ ಮೃತಪಟ್ಟ ಪತ್ನಿಯ ಚಿನ್ನಾಭರಣಗಳನ್ನು ಮಗಳಾದ ವಿಜಯಲಕ್ಷ್ಮಿ ಅವರಿಗೆ ನೀಡದೆ ಲಾಕರ್ ನಲ್ಲಿ ಇರಿಸಿದ್ದರು. ಜಾಗದಲ್ಲಿಯೂ ಪಾಲು ನೀಡಿರಲಿಲ್ಲ ಎನ್ನಲಾಗಿದೆ. ತಾನು ಬದುಕಿರುವವರೆಗೂ ಜಾಗ ಪಾಲು ಮಾಡುವುದಿಲ್ಲ ಎಂದು ಹೇಳುತ್ತಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕಾಗಿ ಅಪ್ಪ ಮಗ ಸೇರಿ ಸಂಚು ರೂಪಿಸಿ ಹತ್ಯೆ ಮಾಡಿರುವುದಾಗಿ ತಿಳಿದು ಬಂದಿದೆ.

ಕಾಸರಗೋಡಿನಿಂದ ಮಾರಕಾಸ್ತ್ರದೊಂದಿಗೆ ಸ್ಕೂಟರಿನಲ್ಲಿ ಬಂದ ಅಪ್ಪ, ಮಗ ಬೆಳಾಲಿನ ಮನೆಗೆ ಬಂದು ಊಟ ಮಾಡಿದ್ದಾರೆ. ಊಟದ ಬಳಿಕ ಬಾಲಕೃಷ್ಣ ಬಡೆಕ್ಕಿಲ್ಲಾಯ ಅವರ ಮೇಲೆ ಮನೆಯೊಳಗೆಯೇ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಹಲ್ಲೆಯ ವೇಳೆ ಮನೆಯಿಂದ ಹೊರಗೆ ಓಡಿದ ಅವರನ್ನು ಬೆನ್ನಟ್ಟಿದ ಆರೋಪಿಗಳು ಅಂಗಳದಲ್ಲಿ ಕುಸಿದು ಬಿದ್ದ ಬಾಲಕೃಷ್ಣರ ಮೇಲೆ ಮತ್ತೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆ ಮಾಡಿದ್ದು, ಬಳಿಕ ಆರೋಪಿಗಳು ಸ್ಕೂಟರ್ ನಲ್ಲಿಯೇ ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೊಲೆ ಆರೋಪಿ ಮುರಳೀಕೃಷ್ಣ ಈ ಹಿಂದೆ ಕಾಸರಗೋಡಿನ ಬದಿಯಡ್ಕ ಠಾಣೆ ವ್ಯಾಪ್ತಿಯಲ್ಲಿ ನಡೆದ ಕೊಲೆಯತ್ನ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

                        

                          

                        

                          

 

`

Leave a Reply

Your email address will not be published. Required fields are marked *