ಬೆಂಗಳೂರು: ಇಡೀ ಕರ್ನಾಟಕವನ್ನು ಬೆಚ್ಚಿ ಬೀಳಿಸಿದ್ದ ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ NIA ಅಧಿಕಾರಿಗಳು ಇಬ್ಬರು ಶಂಕಿತರನ್ನು ಬಂಧಿಸಿದ್ದಾರೆ.
ಶಂಕಿತ ಮುಸಾವಿರ್ ಹುಸೇನ್ ಶಾಜಿಬ್, ಅಬ್ದುಲ್ ಮತೀನ್ ಅಹಮದ್ ತಾಹಾರನ್ನು ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ ಬಂಧಿಸಲಾಗಿದೆ ಎಂದು NIA ಮೂಲಗಳು ತಿಳಿಸಿವೆ. ‘ಸಾಕ್ಷಿ ಸಂಗ್ರಹಕ್ಕಾಗಿ ಆರೋಪಿಗಳ ಸಹಪಾಠಿಗಳು, ಸ್ನೇಹಿತರು, ಬಂಧಿತ ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ.
ಐಇಡಿ ತಂದಿದ್ದ ಮುಸಾವೀರ್ ಹಾಗೂ ಸ್ಫೋಟಕ್ಕೆ ರೂಪುರೇಷೆ ಸಿದ್ಧಪಡಿಸಿದ ಅಬ್ದುಲ್ ಮತೀನ್ ತಾಹ ಇಬ್ಬರು ತೀರ್ಥಹಳ್ಳಿಯವರು ಎಂದು ಹೇಳಲಾಗಿದೆ. ಈ ಹಿಂದೆ ಇದೇ ಪ್ರಕರಣದಲ್ಲಿ ಇವರಿಗೆ ಸಹಾಯ ಮಾಡಿದ್ದ ಮುಜಾಮೀಲ್ ಷರೀಫ್ ಎಂಬಾತನನ್ನು ಕೂಡ ಬಂಧಿಸಲಾಗಿದೆ ಎಂದು ಎನ್ಐಎ ಮೂಲಗಳು ತಿಳಿಸಿವೆ.
ತಲೆಮರೆಸಿಕೊಂಡಿರುವ ಆರೋಪಿಗಳನ್ನು ಪತ್ತೆ ಹಚ್ಚಲು ಮತ್ತು ಬಂಧಿಸಲು ಕರ್ನಾಟಕ, ತಮಿಳುನಾಡು ಮತ್ತು ಉತ್ತರ ಪ್ರದೇಶದ 18 ಸ್ಥಳಗಳಲ್ಲಿ ಎನ್‍ಐಎ ಶೋಧ ನಡೆಸಿತ್ತು. ಅಲ್ಲದೇ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಬ್ಲಾಸ್ಟ್ ನ ಮಾಸ್ಟರ್ ಮೈಂಡ್ ಅಬ್ದುಲ್ ಮತೀನ್ ತಾಹ ಹಾಗೂ ಮಸಾವೀರ್ ಬಗ್ಗೆ ಸುಳಿವು ನೀಡಿದವರಿಗೆ ಬಹುಮಾನ ನೀಡುವುದಾಗಿ ಎನ್ಐಎ ಘೋಷಿಸಿತ್ತು. ಇಬ್ಬರ ಫೋಟೋ ರಿಲೀಸ್ ಮಾಡಿದ್ದ ಎನ್‌ಐಎ ಅಧಿಕಾರಿಗಳು, ಈ ಇಬ್ಬರ ಬಗ್ಗೆಯೂ ಸುಳಿವು ನೀಡುವಂತೆ ಮನವಿ ಮಾಡಿದ್ದರು. ಸುಳಿವು ನೀಡಿದವರಿಗೆ ಇಬ್ಬರ ಸುಳಿವಿಗೂ ತಲಾ 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದರು.
ಅಸ್ಸಾಂ-ಬಂಗಾಳದಲ್ಲಿ ಅಲೆದಾಡುತ್ತಿದ್ದ ಶಂಕಿತರು:
ಇನ್ನು ಬಂಧನ ತಪ್ಪಿಸಿಕೊಳ್ಳಲು ಇಬ್ಬರೂ ಶಂಕಿತ ಉಗ್ರರು ಅಸ್ಸಾಂ ಮತ್ತು ಬಂಗಾಳದಲ್ಲಿ ತಲೆಮರೆಸಿಕೊಂಡು ಓಡಾಡುತ್ತಿದ್ದರು ಎಂದು ಹೇಳಲಾಗಿದೆ. ಆದರೆ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ್ದ ಎನ್ಐಎ ತಂಡ ಇದೀಗ ಇಬ್ಬರೂ ಶಂಕಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.