ಉಡುಪಿ: ಕಾರ್ಕಳ-ಪಡುಬಿದ್ರಿ-ಬೆಳ್ಮಣ್ ರಸ್ತೆಯಲ್ಲಿ ಹೊಸದಾಗಿ ಟೋಲ್ ಸಂಗ್ರಹ ಮಾಡಲು ಸರ್ಕಾರ ಮುಂದಾಗಿದ್ದು ಇದರಿಂದ ಜನರಿಗಾಗುವ ತೊಂದರೆಯನ್ನು ತಪ್ಪಿಸಲು ಜಿಲ್ಲಾಧಿಕಾರಿಗಳು ತಕ್ಷಣ ರಾಜ್ಯ ಸರ್ಕಾರದ ಗಮನಕ್ಕೆ ತರುವ ಮೂಲಕ ರಾಜ್ಯ ಸರ್ಕಾರ ನೂತನ ಟೋಲ್ ಸಂಗ್ರಹಕ್ಕೆ ನೀಡಿರುವ ಆದೇಶವನ್ನು ತಕ್ಷಣವೇ ಹಿಂಪಡೆಯಬೇಕೆಂದು ಬಿಜೆಪಿ ಬೆಳ್ಮಣ್ ಮಹಾ ಶಕ್ತಿಕೇಂದ್ರದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಪಡುಬಿದ್ರಿ-ಬೆಳ್ಮಣ್ ರಸ್ತೆಯಲ್ಲಿ ಆಗಸ್ಟ್ 16ರಿಂದ ಟೋಲ್ ಸಂಗ್ರಹ ಮಾಡುವಂತೆ ರಾಜ್ಯ ಸರ್ಕಾರ ಹಾಸನ ಮೂಲದ ಭಾರತಿ ಕನ್ಸ್ಟ್ರಕ್ಷನ್ಸ್ ಸಂಸ್ಥೆಗೆ ಆದೇಶ ನೀಡಿರುವುದು ಖಂಡನೀಯ. ಪ್ರಸ್ತಾಪಿತ ಟೋಲ್ ಸಂಗ್ರಹ ಕೇಂದ್ರ ನಿರ್ಮಾಣವಾದಲ್ಲಿ ಕಾರ್ಕಳ-ಬೆಳ್ಮಣ್ ಮೂಲಕ ಮುಲ್ಕಿ-ಮಂಗಳೂರು ನಡುವೆ ಸಂಚಾರಕ್ಕೆ ಕೇವಲ 6 ಕಿ.ಮೀ. ಅಂತರದಲ್ಲಿ 2 ಬಾರಿ ಟೋಲ್ ಪಾವತಿಸಬೇಕಾಗುತ್ತದೆ. ಈಗಾಗಲೇ ಜನತೆ ರಾಜ್ಯ ಸರ್ಕಾರದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಕ್ರಮದಿಂದ ಅಪಾರ ನಷ್ಟ ಅನುಭವಿಸುತ್ತಿದ್ದಾರೆ. ಇದೀಗ ಹೊಸ ಟೋಲ್ ಸಂಗ್ರಹದ ಹುನ್ನಾರದಿಂದ ಈ ಭಾಗದ ಜನತೆಗೆ ಅತ್ಯಧಿಕ ಆರ್ಥಿಕ ಹೊರೆಯಾಗಲಿದೆ. ಇದು ಕಾರ್ಕಳ ಮತ್ತು ಬೆಳ್ಮಣ್ ಆಸುಪಾಸಿನ ಜನತೆಗೆ ರಾಜ್ಯ ಸರ್ಕಾರ ಮಾಡುತ್ತಿರುವ ಅತೀ ದೊಡ್ಡ ದ್ರೋಹವಾಗಿದೆ.
ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಬೆಳ್ಮಣ್ ಬಳಿ ಟೋಲ್ ನಿರ್ಮಾಣಕ್ಕೆ ಚಾಲನೆ ನೀಡಿತ್ತು. ಆ ಸಂದರ್ಭದಲ್ಲಿ ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಹಾಗೂ ಸ್ಥಳೀಯರ ತೀವ್ರ ಹೋರಾಟದ ಫಲವಾಗಿ ಸದ್ರಿ ಆದೇಶವನ್ನು ಸರ್ಕಾರ ಹಿಂಪಡೆದಿತ್ತು. ಪ್ರಸ್ತುತ ಸರ್ಕಾರದ ಅವೈಜ್ಞಾನಿಕ ಆರ್ಥಿಕ ನಿಲುವಿನಿಂದಾಗಿ ರಾಜ್ಯ ದಿವಾಳಿಯ ಅಂಚಿನತ್ತ ಸಾಗುತ್ತಿದ್ದು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪುನಃ ಈ ಭಾಗದಲ್ಲಿ ಟೋಲ್ ಸಂಗ್ರಹ ಮಾಡುವುದಕ್ಕೆ ಆದೇಶ ನೀಡುವ ಮೂಲಕ ಜನತೆಗೆ ಮತ್ತಷ್ಟು ತೊಂದರೆ ನೀಡುತ್ತಿದೆ.
ಈ ಪ್ರಸ್ತಾಪಿತ ಟೋಲ್ ಸಂಗ್ರಹ ಕೇಂದ್ರದಿಂದ ಜನರಿಗಾಗುವ ತೊಂದರೆಯನ್ನು ಕೂಡಲೇ ಜಿಲ್ಲಾಧಿಕಾರಿಗಳು ಸರ್ಕಾರದ ಗಮನಕ್ಕೆ ತರುವ ಮೂಲಕ ರಾಜ್ಯ ಸರ್ಕಾರ ಟೋಲ್ ಸಂಗ್ರಹಕ್ಕೆ ನೀಡಿರುವ ಆದೇಶವನ್ನು ತಕ್ಷಣವೇ ಹಿಂಪಡೆಯಬೇಕು ತಪ್ಪಿದಲ್ಲಿ ಬಿಜೆಪಿ ಬೆಳ್ಮಣ್ ಮಹಾ ಶಕ್ತಿಕೇಂದ್ರ ಪರಿಸರದ ಎಲ್ಲಾ ಗ್ರಾಮಗಳ ಪ್ರಮುಖರೊಂದಿಗೆ ಸ್ಥಳೀಯ ‘ಟೋಲ್ ಸಂಗ್ರಹ ವಿರೋಧಿ ಹೋರಾಟ ಸಮಿತಿ’ಯೊಂದಿಗೆ ಕೈಜೋಡಿಸಿ ತೀವ್ರ ಪ್ರತಿಭಟನೆ ನಡೆಸಲಿದೆ ಎಂದು ಮನವಿಯಲ್ಲಿ ತಿಳಿಸಿದೆ.
ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯೆ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಶ್ಮಾ ಉದಯ ಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೋಳ ಜಯರಾಮ ಸಾಲ್ಯಾನ್, ಬೆಳ್ಮಣ್ ಮಹಾ ಶಕ್ತಿಕೇಂದ್ರದ ಅಧ್ಯಕ್ಷ ದೇವೇಂದ್ರ ಶೆಟ್ಟಿ, ಪ್ರಮುಖರಾದ ಸೂರ್ಯಕಾಂತ ಶೆಟ್ಟಿ, ಬಾಲಕೃಷ್ಣ ಹೆಗ್ಡೆ, ಪ್ರವೀಣ್ ಸಾಲ್ಯಾನ್, ಬೆಳ್ಮಣ್ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸಂದೀಪ್ ಅಂಚನ್, ಗ್ರಾಮ ಪಂಚಾಯತ್ ಸದಸ್ಯ ಪ್ರೇಮ್ ಕುಲಾಲ್, ದಯಾನಂದ ಶೆಟ್ಟಿ, ಮೋಹನ್ ಶೆಟ್ಟಿ ಬೋಳ, ಕಿರಣ್ ಶೆಟ್ಟಿ, ವಿಶಾಲ್ ಸಾಲಿಯಾನ್, ನಂದಳಿಕೆ ಗ್ರಾಮ ಪಂಚಾಯತ್ ಸದಸ್ಯ ನಿತ್ಯಾನಂದ ಅಮೀನ್, ಗಿರೀಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
`