Share this news

ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ಮಾತಿನ ಸಮರ ತಾರಕಕ್ಕೇರಿದ್ದು, ಈ ನಡುವೆ ಇಂದು ಸದನದಲ್ಲಿ ಸರ್ಕಾರದ ವಿರುದ್ಧ ಮುಗಿಬಿದ್ದ ಬಿಜೆಪಿ ನಾಯಕರು, ಕಾಂಗ್ರೆಸ್ ಸರ್ಕಾರವನ್ನು ವಜಾಗೊಳಿಸಲು ಒತ್ತಾಯಿಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ, ದೇಶದ್ರೋಹಿಗಳಿಗೆ ರಕ್ಷಣೆ ನೀಡುತ್ತಿರುವ ಸರ್ಕಾರ, ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ ಭವನಕ್ಕೆ ತೆರಳುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಆರ್ ಅಶೋಕ್,ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಭಯೋತ್ಪಾದಕ ಚಟುವಟಿಕೆಗಳು ಮಿತಿಮೀರಿದೆ. ಮುಸ್ಲಿಂ ಮೂಲಭೂತವಾದಿಗಳು ಗಲಾಟೆ ಮಾಡುತ್ತಿದ್ದಾರೆ. ಪಾಕಿಸ್ತಾನಕ್ಕೆ ಜೈಕಾರ ಹಾಕಿದವರನ್ನು ಬಂಧಿಸಿ ಎಂದು ಆಗ್ರಹಿಸಿದರೆ ಸರ್ಕಾರ ಅವರನ್ನು ಬಿಟ್ಟುಬಿಡಿ ಎಂದು ಪೊಲೀಸರಿಗೆ ಸೂಚಿಸಿದೆ. ಎಫ್ಎಸ್ಎಲ್ ವರದಿ ಪರಿಶೀಲನೆ ಎಂದು ಹೇಳಿ ಯಾವುದೋ ವಾಹಿನಿಯ ವೀಡಿಯೋ ಪಡೆದು ಪರೀಕ್ಷೆ ನಡೆಸಿ ಸುಳ್ಳು ವರದಿ ರೂಪಿಸಲಾಗುತ್ತಿದೆ. ಇದನ್ನು ಮುಚ್ಚಿ ಹಾಕಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ವರದಿಯನ್ನು ತಿರುಚುವುದು ಖಂಡಿತ ಎಂದರು.

ಜೈಕಾರದ ಸುದ್ದಿ ಮಾಧ್ಯಮಗಳಲ್ಲಿ ಬಂದು ಜನರಿಗೆ ಗೊತ್ತಾದರೂ ಜನರ ಕಣ್ಣಿಗೆ ಮಣ್ಣೆರಚುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಹೀಗೆಯೇ ಬಿಟ್ಟರೆ ವಿಧಾನಸೌಧ ಕೂಡ ಭಯೋತ್ಪಾದಕರ ತಾಣವಾಗಲಿದೆ. ಕೆಂಗಲ್ ಹನುಮಂತಯ್ಯ ಅವರು ಕಟ್ಟಿದ ವಿಧಾನಸೌಧವನ್ನು ಉಳಿಸಲು ನಾವು ಹೋರಾಟ ಮಾಡುತ್ತಿದ್ದೇವೆ. ಸರ್ಕಾರದ ಕೆಲಸ ದೇವರ ಕೆಲಸ ಎಂದರೆ, ಈ ಸರ್ಕಾರ ಅದಕ್ಕೆ ಅಪಮಾನ ಮಾಡುತ್ತಿದೆ. ಈ ಪ್ರಕರಣ ಮುಚ್ಚಿಹಾಕಿ ದೇಶದ್ರೋಹಿಗಳಿಗೆ ರಕ್ಷಣೆ ನೀಡುವ ಇವರು ಭಂಡರು ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಘಟನೆಯ ನೈತಿಕ ಹೊಣೆಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

             

Leave a Reply

Your email address will not be published. Required fields are marked *