Share this news

ನವದೆಹಲಿ: ಮುಡಾ ಅಕ್ರಮ ಸೇರಿದಂತೆ ವಿವಿಧ ರಾಜ್ಯ ಸರ್ಕಾರದ ಹಗರಣ ಖಂಡಿಸಿ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸುವುದಾಗಿ ಬಿಜೆಪಿ ಘೋಷಿಸಿದೆ.ಆದರೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಪಾದಯಾತ್ರೆ ಬಗ್ಗೆ ಅಸಮಧಾನ ಹೊರಹಾಕಿದ್ದಾರೆ.

ನವದೆಹಲಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಎಚ್‌ಡಿಕೆ, ಕೇರಳದಲ್ಲಿ ಮಳೆಯಿಂದ ನೂರಾರು ಜನರ ಜೀವಕ್ಕೆ ಹಾನಿಯಾಗಿದೆ. ರಾಜ್ಯದಿಂದ ಹೋದವರು ವಾಪಸ್ ಬರಲು ಸಮಸ್ಯೆ ಎದುರಿಸುತ್ತಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಯೆಲ್ಲೋ, ರೆಡ್ ಅಲರ್ಟ್ ಘೋಷಣೆ ಆಗಿದೆ. ಮತ್ತೊಂದೆಡೆ, ಈಗ ಎಲ್ಲರೂ ಕೃಷಿ ಚಟುವಟಿಕೆಯಲ್ಲಿ ಭಾಗವಹಿಸುವ ಸಮಯ. ಹೀಗಾಗಿ ಪಾದಯಾತ್ರೆಯಲ್ಲಿ ಜೆಡಿಎಸ್​​​ ಭಾಗವಹಿಸುವುದಿಲ್ಲ ಎಂದು ಅವರು ತಿಳಿಸಿದರು.

ಕೇವಲ ರಾಜಕೀಯವೇ ನಮಗೆ ಇಲ್ಲಿ ಮುಖ್ಯವಲ್ಲ. ಇಲ್ಲಿ ಕಾನೂನು ಹೋರಾಟ ಮಾಡುವುದು ಮುಖ್ಯ. ಹೀಗಾಗಿ ನಾವು ಪಾದಯಾತ್ರೆಗೆ ನೈತಿಕ ಬೆಂಬಲವನ್ನೂ ನೀಡುವುದಿಲ್ಲ. ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದಾಗ ಯಾಕೆ ಬೆಂಬಲ ಕೊಡಬೇಕು? ಬೆಂಗಳೂರಿನಿಂದ ಮೈಸೂರುವರೆಗೂ ನಮ್ಮ ಪಕ್ಷಕ್ಕೆ ಶಕ್ತಿ ಇದೆ. ನಮ್ಮನ್ನೇ ಪರಿಗಣಿಸಿದಿದ್ದರೆ ಹೇಗೆ ಎಂದು ಬೇಸರ ವ್ಯಕ್ತಪಡಿಸಿದರು.

ಬಿಡದಿಯಿಂದ ಮೈಸೂರುವರೆಗೆ ಕೃಷಿ ಚಟುವಟಿಕೆಗಳು ಆರಂಭವಾಗಿವೆ. ಮಂಡ್ಯ, ಮೈಸೂರು ಭತ್ತದ ನಾಟಿ ಶುರುವಾಗಿದೆ. ಬಿಜೆಪಿ ನಾಯಕರು ಪೂರ್ವ ಸಿದ್ದತೆ ಮಾಡಿಕೊಂಡಿದ್ದರು. ಎಲ್ಲವನ್ನೂ ಅಂತಿಮಗೊಳಿಸಿದ ನಂತರ ನಮಗೂ ಮಾಹಿತಿ ಇರಲಿ ಎಂದು ಸಭೆಗೆ ಕರೆದು ಹೇಳಿದ್ದಾರಷ್ಟೇ. ಇದು ಸೂಕ್ತ ಸಂದರ್ಭ ಅಲ್ಲ ಹಾಗಾಗಿ ಹಿಂದೇ ಸರಿದ್ದೇವೆ. ಜನಸಮಾನ್ಯರ ಭಾವನೆ ಮುಖ್ಯ. ಇದಕ್ಕೆ ನಮ್ಮ ನೈತಿಕ ಬೆಂಬಲವೂ ಇಲ್ಲ ಎಂದು ಅವರು ಹೇಳಿದ್ದಾರೆ.

                        

                          

                        

                          

 

`

Leave a Reply

Your email address will not be published. Required fields are marked *