ಕಾರ್ಕಳ; ರೈತರ ಹಾಗೂ ಸಾರ್ವಜನಿಕರ ವಕ್ಫ್ ಬೋರ್ಡ್ ಹೆಸರಿಗೆ ಮಾಡಿಕೊಡುವ ಸಂಚು ರಾಜ್ಯ ಕಾಂಗ್ರೆಸ್ ಸರ್ಕಾರ ರೂಪಿಸಿದೆ. ಹಿಂದೂಗಳಿಗೆ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ದ್ರೋಹದ ವಿರುದ್ಧ ನಾವೆಲ್ಲರೂ ಬೀದಿಗಿಳಿದು ಹೋರಾಟ ನಡೆಸಬೇಕಾಗಿದೆ. ಮುಸ್ಲಿಮರ ಓಲೈಕೆಗಾಗಿ ವಕ್ಫ್ ಹೆಸರಿನಲ್ಲಿ ಕಾಂಗ್ರೆಸ್ ಲ್ಯಾಂಡ್ ಜಿಹಾದ್ ಮಾಡಲು ಯತ್ನಿಸುತ್ತಿದೆ ಎಂದು ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಆರೋಪಿಸಿದ್ದಾರೆ.
ಅವರು ಕಾರ್ಕಳದ ಬಂಡೀಮಠ ಬಸ್ಸು ನಿಲ್ದಾಣದಲ್ಲಿ ಕಾರ್ಕಳ ಬಿಜೆಪಿ ವತಿಯಿಂದ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಈ ಹಿಂದೆ ದೀಪಾವಳಿ ಸಂದರ್ಭದಲ್ಲಿ ಟಿಪ್ಪು ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಮಡಿಕೇರಿಯಲ್ಲಿ ಹಿಂದೂ ಕಾರ್ಯಕರ್ತ ಕುಟ್ಟಪ್ಪ ಹತ್ಯೆಯಾಯಿತು. ಇದೀಗ ದೀಪಾವಳಿ ಸಂದರ್ಭದಲ್ಲಿ ವಕ್ಫ್ ಮೂಲಕ ಹಿಂದೂಗಳ ಜಮೀನು ಕಬಳಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದರು. ಈ ಹಿಂದೆ ಅನ್ವರ್ ಮಾಣಿಪ್ಪಾಡಿ ವರದಿಯಲ್ಲಿ ವಕ್ಫ್ ಆಸ್ತಿಯನ್ನು ಕಾಂಗ್ರೆಸದ್ ಮುಖಂಡರು ಹಾಗೂ ಮುಸ್ಲಿಂ ಮುಖಂಡರು ಕಬಳಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ, ಆದರೆ ಈ ಭೂಮಿಯ ಬಗ್ಗೆ ಕಾಂಗ್ರೆಸ್ ಸರ್ಕಾರ ಯಾಕೆ ಮೌನವಾಗಿದೆ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಸರ್ಕಾರ ಇದೀಗ ಅಧಿಕಾರ ಮೂಲಕ ರೈತರ, ದೇವಸ್ಥಾನ,ಮಠ, ಮಂದಿರಗಳ ಆಸ್ತಿಯನ್ನು ಕಬಳಿಸಲು ಮುಂದಾಗಿದೆ, ಅಧಿಕಾರಿಗಳು ಕಾಂಗ್ರೆಸ್ ಪಕ್ಷದ ಚೇಲಾಗಳಂತೆ ವರ್ತಿಸಬೇಡಿ,ಸತ್ಯಾಸತ್ಯತೆ ಅರಿತು ಕೆಲಸ ಮಾಡಬೇಕು ಇಲ್ಲವಾದಲ್ಲಿ ಮುಂದೆ ಪರಿಣಾಮವನ್ನು ಎದುರಿಸಬೇಕಾದೀತು ನೆನಪಿಡಿ ಎಂದು ಎಚ್ಚರಿಸಿದರು..
ರಾಜ್ಯ ಸರ್ಕಾರದ ಬಡವರ ಬಿಪಿಎಲ್ ಕಾರ್ಡ್ ರದ್ದುಪಡಿಸುತ್ತಿದ್ದು ಕಾರ್ಕಳದಲ್ಲಿ 6 ಸಾವಿರ ಕಾರ್ಡ್ ರದ್ದಾದರೆ ಉಡುಪಿ ಜಿಲ್ಲೆಯಲ್ಲಿ 25 ಸಾವಿರ ಕಾರ್ಡ್ ರದ್ದಾಗಿದ್ದು, ಕಾಂಗ್ರೆಸ್ ಬಡವರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಜನರಿಗೆ ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಮೋಸ ಮಾಡುತ್ತಿದೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳಿAದ ಇದೀಗ ಬಡವರ ಜಮೀನುಗಳಿಗೂ ಗ್ಯಾರಂಟಿ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಹಿಂಪ ಮುಖಂಡ ಸುನಿಲ್ ಕೆ.ಆರ್ ಮಾತನಾಡಿ, ಹಿಂದೂ ಸಮಾಜವನ್ನು ನಾಶ ಮಾಡಿ ಹಿಂದೂಗಳ ಮಠ ಮಂದಿರ ಧ್ವಂಸ ಮಾಡಿ ಆಸ್ತಿ ಕಬಳಿಸುವ ಹುನ್ನಾರವನ್ನು ಕಾಂಗ್ರೆಸ್ ಸರ್ಕಾರವು ಮತೀಯ ಸಂಘಟನೆಗಳ ಜತೆ ಸೇರಿಕೊಂಡು ಮಾಡುತ್ತಿದೆ ಎಂದರು. ನಮ್ಮ ಆಸ್ತಿ ಭಯೋತ್ಪಾದಕ ಸಂಘಟನೆಗಳಿಗೆ ಹೋಗುವುದನ್ನು ತಡೆಗಟ್ಟಲು ನಾವೆಲ್ಲರೂ ಪಕ್ಷಬೇಧ ಮರೆತು ಒಗ್ಗೂಡಬೇಕಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ವಕ್ಫ್ ಬೋರ್ಡ್ ಭೂಕಬಳಿಕೆಯನ್ನು ನಿಲ್ಲಿಸದಿದ್ದಲ್ಲಿ ವಿಧಾನ ಸೌಧ ಹಾಗೂ ಸಿಎಂ ಮನೆಗೆ ಮುತ್ತಿಗೆ ಹಾಕಿ ಸರ್ಕಾರವನ್ನು ಕಿತ್ತೊಗೆಯುವ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ನ್ಯಾಯವಾದಿ ಮಣಿರಾಜ ಶೆಟ್ಟಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರೇಶ್ಮಾ ಉದಯ ಶೆಟ್ಟಿ ಮಾತನಾಡಿದರು.
ಪ್ರತಿಭಟನಾ ಸಭೆಯಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಹಾವೀರ ಹೆಗ್ಡೆ, ಉದಯ ಕೋಟ್ಯಾನ್, ನಗರ ವಕ್ತಾರ ರವೀಂದ್ರ ಮೊಯ್ಲಿ, ಮಹಿಳಾ ಮೋರ್ಚಾ ಅಧ್ಯಕ್ಷ ವಿನಯಾ ಮುಂತಾದವರು ಉಪಸ್ಥಿತರಿದ್ದರು.