
ಕಾರ್ಕಳ, ನ,18: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮಂಗಳವಾರ ಕಾರ್ಕಳ ಬಿಜೆಪಿ ಕಚೇರಿಗೆ ಭೇಟಿ ನೀಡಿ,ಕಾರ್ಯಕರ್ತರ ಜೊತೆ ಸಭೆ ನಡೆಸಿದರು. ಗ್ರಾಮೀಣ ಮಟ್ಟದಿಂದ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಪ್ರತೀ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ಕಾರ್ಕಳಕ್ಕೆ ಭೇಟಿ ನೀಡಿ ಶಾಸಕ ಸುನಿಲ್ ಕುಮಾರ್, ಬಿಜೆಪಿ ಹಿರಿಯ ಮುಖಂಡರಾದ ಬೋಳ ಪ್ರಭಾಕರ ಕಾಮತ್, ಮಣಿರಾಜ ಶೆಟ್ಟಿ,ಕಾರ್ಕಳ ಮಂಡಲ ಅಧ್ಯಕ್ಷ ನವೀನ್ ನಾಯಕ್ ಸೇರಿದಂತೆ ಮುಖಂಡರು ಹಾಗೂ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರ ಜೊತೆ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಬಿಜೆಪಿ ಕಾರ್ಯಕರ್ತರು ಸಂಘಟಿತರಾಗಿ ಹೋರಾಟ ನಡೆಸಿ ಬಿಜೆಪಿಯನ್ನು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸುವಂತೆ ಕರೆ ನೀಡಿದರು.
ಇದೇ ವೇಳೆ ಬಿಜೆಪಿಯ ಅಗಲಿದ ಹಿರಿಯ ನೇತಾರ ಎಂ.ಕೆ ವಿಜಯಕುಮಾರ್ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಬಳಿಕ ಶಾಸಕ ಸುನಿಲ್ ಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದ ವಿಜಯೇಂದ್ರ ಅವರು ಉಡುಪಿ ದಕ್ಷಿಣ ಕನ್ನಡ ಜಿಲ್ಲೆಗಳ ಶಾಸಕರು, ಹಾಗೂ ಪಕ್ಷದ ಪ್ರಮುಖರ ಜೊತೆ ಚರ್ಚಿಸಿ ಔತಣಕೂಟದಲ್ಲಿ ಭಾಗಿಯಾದರು.

