
ಬೆಳಗಾವಿ (ಸುವರ್ಣವಿಧಾನಸೌಧ): ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಅವಿಶ್ವಾಸ ನಿರ್ಣಯ ಮಂಡಿಸಿದರೆ ಅದಕ್ಕೆ ಸೋಲಾಗುವುದು ಶತಃಸಿದ್ಧ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಳಗಾವಿ ಅಧಿವೇಶನದಲ್ಲಿ ನಮ್ಮ ಸರ್ಕಾರದ ವಿರುದ್ಧ ಹಲವಾರು ಅಸ್ತ್ರಗಳನ್ನು ಪ್ರಯೋಗಿಸಲಾಗುವುದು ಎಂದು ಪ್ರತಿ ಪಕ್ಷದ ನಾಯಕ ಆರ್.ಅಶೋಕ ಹೇಳಿದ್ದಾರೆ. ಆದರೆ, ಅವರ ಪಕ್ಷದ ಬತ್ತಳಿಕೆಯಲ್ಲಿ ಬಾಣವೇ ಇಲ್ಲ ಎಂದು ವ್ಯಂಗ್ಯವಾಡಿದರು.
ಪ್ರತಿಪಕ್ಷ ಬಿಜೆಪಿಯಲ್ಲೇ ಅಶೋಕ ಬಣ, ವಿಜಯೇಂದ್ರ ಬಣ, ಕುಮಾರ್ ಬಂಗಾರಪ್ಪ ಬಣ ಮತ್ತು ರಮೇಶ್ ಜಾರಕಿಹೊಳಿ ಬಣಗಳಿವೆ. ಮೊದಲು ಆ ಬಣಗಳ ಕಿತ್ತಾಟವನ್ನು ಅಶೋಕ್ ಅವರು ಪರಿಹರಿಸಲಿ. ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬಣಗಳಿಲ್ಲ. ನಮ್ಮದೇನಿದ್ದರೂ ಕಾಂಗ್ರೆಸ್ ಬಣ ಎಂದು ಅವರು ಸ್ಪಷ್ಟಪಡಿಸಿದರು.
ಬಿಜೆಪಿಯವರು ಜನರಲ್ಲಿ ಕೇವಲ ಮತೀಯ ಭಾವನೆಗಳನ್ನು ಕೆರಳಿಸಿ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆಯೇ ಹೊರತು, ಯಾವತ್ತಾದರೂ ಅಭಿವೃದ್ಧಿ ಬಗ್ಗೆ ರಾಜಕೀಯ ಮಾಡಿಲ್ಲ. ಜನರ ಪರವಾಗಿ ಎಂದಿಗೂ ಕೆಲಸವನ್ನೂ ಮಾಡಿಲ್ಲ ಎಂದು ಸಚಿವ ಬೈರತಿ ಸುರೇಶ್ ಟೀಕಿಸಿದರು.
ನಮ್ಮ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದಾಗಿ ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಹೇಳಿಕೊಂಡಿವೆ. ಆ ನಿರ್ಣಯ ಮಂಡಿಸಲಿ. ಆ ಪಕ್ಷಗಳ ಕೆಲವು ಶಾಸಕರೇ ನಮ್ಮ ಸರ್ಕಾರದ ಪರವಾಗಿ ಮತ ಹಾಕುವ ವಿಶ್ವಾಸ ನನಗಿದೆ. ಹೀಗಾಗಿ ಅವಿಶ್ವಾಸ ನಿರ್ಣಯಕ್ಕೆ ಸೋಲು ಖಚಿತವಾಗಲಿದೆ ಎಂದು ಸುರೇಶ್ ಕಿಡಿ ಕಾರಿದರು.
.
.
