ಅಯೋಧ್ಯೆ: ಅಯೋಧ್ಯೆಯಲ್ಲಿರುವ ರಾಮ ಮಂದಿರಕ್ಕೆ ಇಂದು ಬಾಂಬ್ ಬೆದರಿಕೆ ಬಂದಿದ್ದು ಸೈಬರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ತನಿಖಾಧಿಕಾರಿಗಳು ಬೆದರಿಕೆ ಇ ಮೇಲ್ ಮೂಲ ಹುಡುಕಿದ್ದು ಅದು ತಮಿಳುನಾಡಿನಿಂದ ಬಂದಿರುವುದಾಗಿ ಪ್ರಾಥಮಿಕ ವರದಿಗಳು ಹೇಳಿವೆ. ಇದರ ಜೊತೆಯಲ್ಲೇ, ಮುನ್ನೆಚ್ಚರಿಕೆ ಕ್ರಮವಾಗಿ ಶ್ರೀರಾಮಮಂದಿರಕ್ಕೆ ಒದಗಿಸಲಾಗಿದ್ದ ಬಿಗಿಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ.
ಈಗಾಗಲೇ ಶ್ರೀರಾಮಮಂದಿರವನ್ನು ಸ್ಫೋಟಿಸುವುದಾಗಿ ಜೈಶ್-ಎ-ಮೊಹಮ್ಮದ್ ಸಂಘಟನೆಯು ಅನೇಕ ಬಾರಿ ಬೆದರಿಕೆ ಇ-ಮೇಲ್ ಕಳುಹಿಸಿದೆ. ಈ ಎಲ್ಲಾ ಇ-ಮೇಲ್ ಗಳನ್ನು ತನಿಖೆಗೆ ಒಳಪಡಿಸಿರುವ ತನಿಖಾಧಿಕಾರಿಗಳು ಇವುಗಳ ಮೂಲವನ್ನು ಪತ್ತೆ ಮಾಡಿದೆ. ಸಂಶಯಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಈಗ ತಮಿಳುನಾಡಿನಿಂದ ಬಂದಿದೆ ಎಂದು ಹೇಳಲಾಗಿರುವ ಇ-ಮೇಲ್ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.
ಅಯೋಧ್ಯೆಯಲ್ಲಿರುವ ರಾಮ ಮಂದಿರವು 135.5 ಮಿಲಿಯನ್ ದೇಶೀಯ ಪ್ರವಾಸಿಗರನ್ನು ಆಕರ್ಷಿಸಿದೆ. ಇದು 2024ರಲ್ಲಿ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಭೇಟಿ ನೀಡಿದ ತಾಣವಾಗಿ ತಾಜ್ ಮಹಲ್ ಅನ್ನು ಮೀರಿಸಿದೆ. ಪ್ರವಾಸಿಗರು ಮತ್ತು ಭಕ್ತರ ಸಂಖ್ಯೆ ಹೆಚ್ಚುತ್ತಿರುವ ಕಾರಣ, ಸ್ಥಳೀಯ ಪೊಲೀಸರು ನಗರದಾದ್ಯಂತ ಗಸ್ತು ತಿರುಗುವಿಕೆಯನ್ನು ಹೆಚ್ಚಿಸಿದ್ದಾರೆ. ರಾಮ ಮಂದಿರದ ಸುತ್ತಲೂ ಭದ್ರತಾ ಗೋಡೆಯ ನಿರ್ಮಾಣ ಕಾರ್ಯ ನಡೆಯುತ್ತಿದೆ.