ಉಡುಪಿ: ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕುಂಜಾಲು ಎಂಬಲ್ಲಿ ಹಸುವಿನ ರುಂಡ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಬ್ರಹ್ಮಾವರ ಠಾಣಾ ಪೊಲೀಸರು ಬಂಧಿಸಿದ್ದು,ತಲೆಮೆರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ. ಕೇಶವ, ರಾಮಣ್ಣ, ನವೀನ್, ಪ್ರಸಾದ್, ರಾಜೇಶ್, ಸಂದೇಶ್ ಬಂಧಿತರು. ಕುಂಜಾಲು ರಾಮ ಮಂದಿರದ ಬಳಿ ಶನಿವಾರ (ಜೂ.29) ತಡರಾತ್ರಿ ಗೋವಿನ ರುಂಡ ಪತ್ತೆಯಾಗಿತ್ತು.
ಘಟನೆ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆಗೆ ಉಡುಪಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರು ನಾಲ್ಕು ತಂಡಗಳನ್ನು ರಚಿಸಿದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಘಟನೆ ನಡೆದು 24 ಗಂಟೆಯೊಳಗಾಗಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಮಾತನಾಡಿ, ಕುಂಜಾಲು ಜಂಕ್ಷನ್‌ನಲ್ಲಿ ಹಸುವಿನ ರುಂಡ, ದೇಹದ ಇತರೆ ಭಾಗ ಪತ್ತೆಯಾಗಿತ್ತು. ಕುಂಜಾಲು ಗ್ರಾಮದ ನಿವಾಸಿ ರಾಮಣ್ಣ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಕೇಶವ್ ಎಂಬುವವರು ಹಸು ನೋಡಿಕೊಳ್ಳಲು ಆಗುತ್ತಿಲ್ಲವೆಂದು ರಾಮಣ್ಣಗೆ ನೀಡಿದ್ದರು ಎಂದು ತಿಳಿಸಿದರು.
ಸಂದೇಶ್ ಎಂಬವರ ಸ್ವಿಫ್ಟ್ ಕಾರಿನಲ್ಲಿ ಹಸುವನ್ನು ಸಾಗಾಟ ಮಾಡಲಾಗಿತ್ತು. ಕ್ವಾರಿ ಬಳಿ ಆರೋಪಿಗಳಾದ ಪ್ರಸಾದ್, ನವೀನ್ ಮತ್ತು ರಾಮಣ್ಣ ಮೂವರು ಸೇರಿಕೊಂಡು ಹಸು ಕಡಿದಿದ್ದರು. ಬಳಿಕ, ಹಸುವಿನ ದೇಹವನ್ನು ದ್ವಿಚಕ್ರ ವಾಹನದಲ್ಲಿ ತೆಗೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ತಲೆ ರಾಮ ಮಂದಿರದ ಬಳಿ ಬಿದ್ದಿದೆ. ಸಾಗಾಟದ ವೇಳೆ ಆಕಸ್ಮಿ ಆರೋಪಿಗಳು ಹಸು ದೇಹ ಸಾಗಿಸಲು ಬಳಸಿದ್ದ ಸ್ಕೂಟಿ, ಕಾರು ವಶಕ್ಕೆ ಪಡೆದಿದ್ದೇವೆ ಎಂದರು.
ಕೇಸ್ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಊಹಾಪೋಹ ಹಬ್ಬಿಸಲಾಗಿತ್ತು. ಸೂಕ್ಷ್ಮ ವಿಚಾರಗಳ ಬಗ್ಗೆ ಕೋಮು ಸೂಕ್ಷ್ಮದ ಪೋಸ್ಟ್ ಹಾಕಬೇಡಿ. ಕರಾವಳಿ ಭಾಗದಲ್ಲಿ ಈ ರೀತಿಯ ಪ್ರಕರಣಗಳು ಕೊಲೆ ಪ್ರಕರಣದಷ್ಟೇ ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.