ಕಾರ್ಕಳ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಪಂಚ ಗ್ಯಾರಂಟಿ ಯೋಜನೆಗಳು ಪ್ರತಿಯೊಬ್ಬ ಅರ್ಹ ಫಲಾನುಭವಿಗೂ ತಲುಪಬೇಕು. ಈ ನಿಟ್ಟಿನಲ್ಲಿ ಗ್ಯಾರಂಟಿ ಸಮಿತಿಯ ಸದಸ್ಯರು ಹಾಗೂ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ನಡೆಸಬೇಕು. ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕುರಿತ ತೊಡಕುಗಳು ಹಾಗೂ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಪ್ರತಿಯೊಂದು ಗ್ರಾಮ ಪಂಚಾಯತಿ ಮಟ್ಟದಲ್ಲಿ ಗ್ಯಾರಂಟಿ ಅದಾಲತ್ ನಡೆಯಲಿದೆ ಎಂದು ಕಾರ್ಕಳ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ ಹೇಳಿದರು.
ಅವರು ಜೂ.30 ರಂದು ಸೋಮವಾರ ಕಾರ್ಕಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಪಂಚ ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತಾನಾಡಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಕೆಲವೊಂದು ಸಮಸ್ಯೆಗಳಿಂದ ಫಲಾನುವಿಗಳು ಯೋಜನೆಗಳಿಂದ ವಂಚಿತರಾಗುತ್ತಿದ್ದು ಇದಕ್ಕಾಗಿ ಗ್ರಾಮ ಮಟ್ಟದಲ್ಲೇ ಪರಿಹಾರ ಕಂಡುಕೊಳ್ಳಲಾಗುವುದು ಎಂದ ಅವರು, ಜು.3 ರಂದು ಇನ್ನಾ ಗ್ರಾ.ಪಂ.ವ್ಯಾಪ್ತಿಯಲ್ಲಿ ಗ್ರಾಮ ಮಟ್ಟದ ಗ್ಯಾರಂಟಿ ಅದಾಲತ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದರು.
ಮುಂದಿನ ದಿನಗಳಲ್ಲಿ ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ಪ್ರತೀ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ, ಫಲಾನುಭವಿಗಳು ಯೋಜನೆಗಳ ಕುರಿತ ಸಮಸ್ಯೆಗಳಿದ್ದಲ್ಲಿ ಸಭೆಯ ಗಮನಕ್ಕೆ ತರಬಹುದು, ಡಿಬಿಟಿ ಕುರಿತ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದರು.
ಸಮಿತಿ ಸದಸ್ಯ ಸಂತೋಷ್ ದೇವಾಡಿಗ ಮಾತನಾಡಿ, ಗೃಹಲಕ್ಷ್ಮೀ ಯೋಜನೆಯ ಬಗ್ಗೆ ಬಡ ಮಹಿಳೆಯೋರ್ವರು ಪ್ರಶಂಸೆ ವ್ಯಕ್ತಪಡಿಸಿರುವ ಬಗ್ಗೆ ಸಭೆಯ ಗಮನ ಸೆಳೆದರು.ಇದು ಸರ್ಕಾರದ ಸಾಧನೆಗೆ ಹಿಡಿದ ಕೈಗನ್ನಡಿ ಎಂದರು.ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ರಾವ್ ಮಾತನಾಡಿ, ಈ ಬಗ್ಗೆ ದಾಖಲೀಕರಣ ಮಾಡಿಕೊಳ್ಳುವ ವ್ಯವಸ್ಥೆ ಇಲಾಖೆಯಲ್ಲಿದೆ. ಅಂತಹ ಫಲಾನುಭವಿಗಳನ್ನು ಗುರುತಿಸಿ ಮಾಹಿತಿ ನೀಡುವಂತೆ ತಿಳಿಸಿದರು. ಶಕ್ತಿ ಯೋಜನೆಯಡಿ ಓಡಾಟ ನಡೆಸುವ ಕೆಎಸ್ಆರ್ಟಿಸಿ ಬಸ್ಸುಗಳ ನಿರ್ವಹಣೆ ಕೊರತೆಯ ಬಗ್ಗೆ ಸದಸ್ಯ ಸಂತೋಷ್ ದೇವಾಡಿಗ ಗಮನ ಸೆಳೆದರು. KSRTC ಬಸ್ ನಿಲ್ದಾಣ ಅಧಿಕಾರಿ ಅಶೋಕ್ ಶೆಟ್ಟಿ ಮಾತನಾಡಿ, ಈ ಬಗ್ಗೆ ಸರಕಾರದ ಗಮನ ಸೆಳೆದಿದ್ದೇವೆ. ಪ್ರಸ್ತುತ ಬೆಂಗಳೂರು ನಗರದ BMTC ಬಸ್ಸುಗಳನ್ನು ತಾತ್ಕಾಲಿಕವಾಗಿ ಓಡಿಸಲಾಗುತ್ತಿದೆ. ಹೊಸ ಬಸ್ಸುಗಳನ್ನು ಒದಗಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ನಿಟ್ಟೆ ಹಾಗೂ ಬೆಳ್ಮಣ್ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್ಸುಗಳ ನಿಲುಗಡೆಗೆ ಅವಕಾಶ ಕಲ್ಪಿಸುವಂತೆ ಸಂತೋಷ್ ದೇವಾಡಿಗ ಮನವಿ ಮಾಡಿದರು.ಈ ಕುರಿತು ಪರಿಶೀಲಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.
ಗ್ರಾಮೀಣ ಭಾಗಗಳಿಗೆ ಬಸ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಕಳ, ಅಜೆಕಾರು, ಹೆಬ್ರಿ,ಪೆರ್ಡೂರು,ಹಿರಿಯಡ್ಕ ಹಾಗೂ ಉಡುಪಿ ಮಾರ್ಗದಲ್ಲಿ ಬಸ್ಸು ಓಡಾಟಕ್ಕೆ ಪರ್ಮಿಟ್ ಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.
ಆದಾಯ ತೆರಿಗೆ ಫೈಲಿಂಗ್ ಮಾಡಿದ್ದಾರೆ ಎನ್ನುವ ಕಾರಣಕ್ಕೆ ತಾಲೂಕಿನಲ್ಲಿ ಒಟ್ಟು 485 ಫಲಾನುಭವಿಗಳಿಗೆ ಗೃಹಲಕ್ಷ್ಮೀ ಯೋಜನೆ ತಲುಪುತ್ತಿಲ್ಲ ಎನ್ನುವ ದೂರುಗಳಿದ್ದು, ಈ ಬಗ್ಗೆ ಪರಿಹಾರ ಕಂಡುಕೊಳ್ಳುವಂತೆ ಅಜಿತ್ ಹೆಗ್ಡೆ ಸೂಚಿಸಿದರು. ಪ್ರತೀ ಪಡಿತರ ಅಂಗಡಿಗಳಲ್ಲಿ ಅನ್ನಭಾಗ್ಯದ ಬೋರ್ಡ್ ಅಳವಡಿಸುವಂತೆ ಆಹಾರ ಇಲಾಖೆಗೆ ಸೂಚಿಸಲಾಯಿತು.
ಪಂಚ ಗ್ಯಾರಂಟಿ ಯೋಜನೆ ಅನುಷ್ಟಾನಕ್ಕೆ ಸಂಬಂಧಿಸಿದಂತೆ ಸುರೇಶ್ ಆಚಾರ್ಯ ಈದು, ಸಂತೋಷ್ ದೇವಾಡಿಗ ಬೋಳ, ಚರಿತ್ರಾ ಶೆಟ್ಟಿ ಅಜೆಕಾರು, ವಿಶ್ವನಾಥ ಭಂಡಾರಿ ಕುಕ್ಕುಂದೂರು, ಜಯ ಕುಲಾಲ್ ಇರ್ವತ್ತೂರು, ಪಿಲಿಫ್, ಯತೀಶ್ ಕಲ್ಯಾ ಮತ್ತು ಸಹೀಂ ಅಯ್ಯಪ್ಪನಗರ ಮಾತನಾಡಿದರು.
ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ರಾವ್ ಉಪಸ್ಥಿತರಿದ್ದರು.