
ಕಾರ್ಕಳ, ಜ.09: ಮಹಾತ್ಮಾ ಗಾಂಧೀಜಿಯವರ ಗ್ರಾಮಾಭ್ಯುದಯದ ಕನಸನ್ನು ನನಸಾಗಿಸಿದ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಹೆಸರನ್ನು “ವಿಬಿ- ಜಿ ರಾಮ್ ಜಿ” ಎಂದು ಮರು ನಾಮಕರಣ ಮಾಡುವ ಮೂಲಕ ಯೋಜನೆಯ ಮೂಲ ಸ್ವರೂಪವನ್ನೇ ಬದಲಿಸಿ ಪ್ರಧಾನಿ ಮೋದೀ ನೇತೃತ್ವದ ಕೇಂದ್ರ ಸರಕಾರ ಗ್ರಾಮೀಣ ಪರಿಸರದ ಬಡವರ, ಮಹಿಳೆಯರ, ಸಣ್ಣ ರೈತರ ಅನ್ನದ ಬಟ್ಟಲಿಗೆ ಕನ್ನ ಹಾಕಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಆರೋಪಿಸಿದೆ.
ಪ್ರಧಾನಿ ಮನಮೋಹನ ಸಿಂಗ್ ಅವಧಿಯಲ್ಲಿ ಈ ಕಾಯಿದೆ ಪ್ರಕಾರ ಸಂಪೂರ್ಣ ಕೇಂದ್ರ ಸರಕಾರದ ಅನುದಾನ ನೀಡುತ್ತಿತ್ತು. ಈಗಾಲೇ ಗ್ರಾಮೀಣ ಪರಿಸರದ ಬಹುಬೇಡಿಕೆಯ ಈ ಯೋಜನೆಯಡಿ ಕೇಂದ್ರ ಸರಕಾರ ರಾಜ್ಯಕ್ಕೆ ಬರಬೇಕಾದ 622ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಆದರೂ ಇದೀಗ ಈ ಪರಿವರ್ತಿತ ಮಸೂದೆ ಕೇಂದ್ರದ ಆರ್ಥಿಕ ಅನುಧಾನವನ್ನು ಶೇ. 60 ರೂ.ಗೆ ಇಳಿಸಿದ್ದು ರಾಜ್ಯದ ಅನುಧಾನವನ್ನು ಶೇ.40 ರೂ. ಹೆಚ್ಚುವರಿ ಮಾಡಿ ನಿಗದಿ ಪಡಿಸಿದೆ. ಕೆಲಸದ ದಿನಗಳನ್ನು 100 ರಿಂದ 125 ದಿನಕ್ಕೆ ಹೆಚ್ಚಿಸಿದೆ. ಮಸೂದೆ ಅನ್ವಯದ ಆದ್ಯತಾ ಕ್ಷೇತ್ರಗಳನ್ನು ಬದಲಿಸಲಾಗಿದ್ದು ನಿರ್ದಿಷ್ಟ ವಲಯವನ್ನು ನಿಗದಿ ಪಡಿಸಲಾಗಿದೆ. ಪಂಚಾಯತ್ ವ್ಯಾಪ್ತಿಯಲ್ಲಿ ಎಲ್ಲಿ ಬೇಕಾದರೂ ಕೆಲಸ ಮಾಡಬಹುದಾದ ಕಾರ್ಮಿಕರ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಕಾರ್ಮಿಕರು ಮೂಲಸೌಲಭ್ಯ ಅಭಿವೃದ್ದಿಯೂ ಸೇರಿ ಪರಿಸರ ಸಂರಕ್ಷಣೆ, ಜಲಸಂಪನ್ಮೂಲ ಆದಿಯಾಗಿ ಪ್ರಾಕೃತಿಕ ಆಧ್ಯತಾ ವಲಯದ ಕೆಲಸಗಳ ಹೊರತಾಗಿ ಗ್ರಾಮೀಣ ಪರಿಸರದ ರೈತ ಸ್ನೇಹಿ ಕೆಲಸಗಳಾದ ಹಟ್ಟಿ ಕೊಟ್ಟಿಗೆ ಅಗಳು ಮೊದಲಾದ ಕೆಲಸಗಳನ್ನು ಕೈ ಬಿಡಲಾಗಿದೆ ಎನ್ನಲಾಗಿದೆ. ಬೀಜ ಬಿತ್ತನೆ ಮತ್ತು ಕೊಯ್ಲಿನ ಅವಧಿಯಲ್ಲಿ ಈ ಯೋಜನೆಯಡಿ ಕೂಲಿ ಕೆಲಸವನ್ನು ನಿರ್ಬಂಧಿಸಿರು ವುದು ಮಸೂದೆಯ ಬೇಜವಾಬ್ದಾರಿತನಕ್ಕೆ
ಸಾಕ್ಷಿಯಾಗಿದೆ.
ಈ ಹಿಂದಿನ ಸರಕಾರಗಳ ಯೋಜನೆಗಳ ಹೆಸರುಗಳನ್ನು ಬದಲಿಸುವುದನ್ನೇ ತಮ್ಮ ಸಾಧನೆ ಎಂದು ಬಿಂಬಿಸುವ ಬಿಜೆಪಿಗೆ ಅಬಿವೃದ್ಧಿಯ ಅರ್ಥ ತಿಳಿದಿಲ್ಲ. ಮರ್ಯಾದ ಪುರುಷೋತ್ತಮ ರಾಮನ ಹೆಸರನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಬಿಜೆಪಿಗೆ ದೇಶದ ಸಂವಿಧಾನದ ಬಗ್ಗೆ ವಿಶ್ವಾಸವಿಲ್ಲ. ಈ ಮಸೂದೆಯ ಮೂಲಕ ಬಿಜೆಪಿ ಭಾರತದ ಸಂವಿಧಾನ ಪ್ರತಿಪಾದಿಸಿ ಕೊಂಡುಬಂದಿರುವ ಗ್ರಾಮೀಣ ಪರಿಸರದ ಮೂಲಸೌಲಭ್ಯ ಅಭಿವೃದ್ದಿ ಸಾಧನೆಯ ಗ್ರಾಮೀಣ ಜನರ ಮೂಲಭೂತ ಹಕ್ಕಿಗೆ ಚ್ಯುತಿ ತಂದಿದೆ. ದೇಶದ ಹಿತದೃಷ್ಟಿಯಿಂದ ಇದು ಖಂಡನೀಯ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

.
.
