ಬೆಂಗಳೂರು ಆ.01: ಧರ್ಮಸ್ಥಳದ ಆಸುಪಾಸಿನಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ಅನಾಮಧೇಯ ಸಾಕ್ಷಿದಾರ ಹೇಳಿಕೆ ನೀಡಿರುವ ಪ್ರಕರಣದ ಕುರಿತು ಮಾಧ್ಯಮಗಳಿಗೆ ಸುದ್ದಿ ಪ್ರಸಾರಕ್ಕೆ ವಿಧಿಸಲಾಗಿದ್ದ ನಿರ್ಬಂಧವನ್ನು ರದ್ದುಪಡಿಸಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಧರ್ಮಸ್ಥಳದ ಪ್ರಕರಣದ ಕುರಿತು ಸುದ್ದಿಗಳು ಪ್ರಕಟವಾಗದಂತೆ ಡಿ.ಹರ್ಷೇಂದ್ರ ಕುಮಾರ್ ಮಾಧ್ಯಮಗಳ ವಿರುದ್ಧ ಪ್ರತಿಬಂಧಕಾದೇಶ ತಂದಿದ್ದರು. ಈ ಪ್ರತಿಬಂಧಕಾದೇಶವನ್ನು ಪ್ರಶ್ನಿಸಿ ಮಂಗಳೂರಿನ ರಾಂ ಪೇಜ್ ಕುಡ್ಲ ಯೂಟ್ಯೂಬ್ ಚಾನೆಲಿನ ಅಜಯ್ ಅವರು ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು ವಿಚಾರಣೆ ನಡೆಸಿ,ಪ್ರತಿಬಂಧಕ ಆಜ್ಞೆಯನ್ನು ರದ್ದುಪಡಿಸಿ ಮಧ್ಯಂತರ ಅರ್ಜಿಯನ್ನು ಹೊಸದಾಗಿ ಪರಿಗಣಿಸಲು ಪ್ರಕರಣವನ್ನು ಸಕ್ಷಮ ನ್ಯಾಯಾಲಯಕ್ಕೆ ವಾಪಾಸ್ ಕಳುಹಿಸಿದೆ. ವಿಚಾರಣಾಧೀನ ನ್ಯಾಯಾಲಯವು ಈ ಆದೇಶವನ್ನು ಮಾಡಿರುವ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಸಕ್ಷಮ ನ್ಯಾಯಾಲಯವು ಮಧ್ಯಂತರ ಅರ್ಜಿಯನ್ನು ತುರ್ತಾಗಿ ನಿರ್ಧರಿಸಬೇಕು ಎಂಬುದಾಗಿ ತೀರ್ಪಿನಲ್ಲಿ ಉಲ್ಲೇಖಿಸಿ ಆದೇಶಿಸಿದೆ.