ನವದೆಹಲಿ : ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಪಶ್ಚಿಮ ಬಂಗಾಳದ TMC ನಾಯಕಿ ಮಹುವಾ ಮೊಯಿತ್ರಾ ಅವರ ಮನೆ ಹಾಗೂ ಕಚೇರಿಗಳ ಮೇಲೆ ಶನಿವಾರ ಮುಂಜಾನೆ ಸಿಬಿಐ ದಾಳಿ ನಡೆಸಿ ಹಲವಾರು ದಾಖಲೆಗಳನ್ನು ವಶಕ್ಕೆ ಪಡೆದು ಶೋಧ ನಡೆಸುತ್ತಿದೆ.
ತೃಣಮೂಲ ಕಾಂಗ್ರೆಸ್ ಮಾಜಿ ಸಂಸದೆ ಮಹುವಾ ಮೊಯಿತ್ರಾಗೆ ಸಂಬಂಧಿಸಿದ ಕೋಲ್ಕತಾ ಸೇರಿದಂತೆ ವಿವಿಧ ಕಡೆಗಳಲ್ಲಿ ಸಿಬಿಐ ನ ತಂಡಗಳು ಶೋಧಕಾರ್ಯ ನಡೆಸುತ್ತಿವೆ.
ಇದಕ್ಕೂ ಮುನ್ನ ಭ್ರಷ್ಟಾಚಾರ ವಿರೋಧಿ ಓಂಬುಡ್ಸ್ಮನ್ ಲೋಕಪಾಲ್ ಸಿಬಿಐಗೆ ನಿರ್ದೇಶನ ನೀಡಿದ್ದು, ತೃಣಮೂಲ ಕಾಂಗ್ರೆಸ್ ನಾಯಕಿ ಮಹುವಾ ಮೊಯಿತ್ರಾ ವಿರುದ್ಧದ ಪ್ರಶ್ನೆಗಾಗಿ ನಗದು ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿದೆ. ಆರು ತಿಂಗಳೊಳಗೆ ಸಿಬಿಐ ತನ್ನ ವರದಿಯನ್ನು ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ.
ಕಳೆದ ವರ್ಷ ಡಿಸೆಂಬರ್ ನಲ್ಲಿ ಮೊಯಿತ್ರಾ ಅವರು ದುರ್ವರ್ತನೆ ನಡವಳಿಕೆ ತೋರಿದ ಆರೋಪದ ಮೇಲೆ ಲೋಕಸಭೆಯಿಂದ ಹೊರಹಾಕಲ್ಪಟ್ಟಿದ್ದರು. ಈ ನಡುವೆ ಟಿಎಂಸಿ ಅವರನ್ನು ಪಶ್ಚಿಮ ಬಂಗಾಳದ ಕೃಷ್ಣನಗರ ಲೋಕಸಭಾ ಸ್ಥಾನಕ್ಕೆ ತಮ್ಮ ಅಭ್ಯರ್ಥಿಯಾಗಿ ಘೋಷಿಸಲು ನಿರ್ಧರಿಸಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ


