

ಕಾರ್ಕಳ, ಆ.16: ಸಾಮಾನ್ಯವಾಗಿ ರಾಜಕಾರಣಿಗಳ ಹುಟ್ಟಿದ ದಿನವನ್ನು ಅವರ ಬೆಂಬಲಿಗರು ಯಾವುದಾದರೊಂದು ಹೊಟೇಲ್ ಅಥವಾ ರೆಸಾರ್ಟ್ ಗಳಲ್ಲಿ ಆಚರಣೆ ಮಾಡುವುದು ಸರ್ವೇಸಾಮಾನ್ಯ. ಆದರೆ ಇಲ್ಲೊಬ್ಬ ಜನಪ್ರತಿನಿಧಿ ಅದರಲ್ಲೂ ಪ್ರಭಾವಿ ಶಾಸಕರು ತನ್ನ ಹುಟ್ಟು ಹಬ್ಬವನ್ನು ಜನಸೇವಾ ಕಾರ್ಯದ ಮೂಲಕ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಹೌದು ಆ ಜನಪ್ರತಿನಿಧಿ ಯಾರೆಂದರೆ ಕಾರ್ಕಳ ಶಾಸಕ ಸುನಿಲ್ ಕುಮಾರ್.ಶಾಸಕ ಸುನಿಲ್ ಕುಮಾರ್ ಅವರಿಗೆ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ತನ್ನ 50 ರ ಸಂಭ್ರಮವನ್ನು 50 ಕ್ಕೂ ಹೆಚ್ಚು ಸೇವಾ ಕಾರ್ಯದಲ್ಲಿ ಭಾಗಿಯಾಗುವ ಮೂಲಕ ವಿಶಿಷ್ಟವಾಗಿ ಹುಟ್ಟು ಹಬ್ಬವನ್ನು ಆಚರಿಸಿ ಮಾದರಿ ಎನಿಸಿಕೊಂಡಿದ್ದಾರೆ.
ಅವರ ಹುಟ್ಟು ಹಬ್ಬದಲ್ಲಿ ಸಾರ್ವಜನಿಕರ ಅಭಿನಂದನೆಯಿರಲಿಲ್ಲ, ಬೃಹತ್ ವೇದಿಕೆ, ಸಾಂಸ್ಕೃತಿಕ ಕಾರ್ಯಕ್ರಮ, ಕೇಕ್ ಕತ್ತರಿಸುವ ಸಂಭ್ರಮ ಇರಲಿಲ್ಲ, ಬದಲಾಗಿ ಶಾಸಕರ ಮುಖದಲ್ಲಿ ಅಶಕ್ತರ ಕಣ್ಣೀರು ಒರೆಸಿ ಅವರ ಬಾಳಿಗೆ ಬೆಳಕಾದ ಸಾರ್ಥಕತೆಯ ಕಳೆಯಿತ್ತು.
ಹುಟ್ಟು ಹಬ್ಬದ ದಿನ ಮುಂಜಾನೆ ಕಾರ್ಕಳದ ಪುಲ್ಕೇರಿ ನಿವಾಸಿ ಸುಂದರಿಯವರಿಗೆ ನೂತನ ಮನೆ ನಿರ್ಮಾಣ ಮಾಡಿ ಇಂದು ಹಸ್ತಾಂತರಿಸಿದರು. ಹೆಬ್ರಿಯ ಬಡಕುಟುಂಬ ಚುಕ್ರಿ, ಗಣೇಶ್ ಸಾಣೂರು ಸೇರಿಸಿ ಇತರ ಅಶಕ್ತ ಕುಟುಂಬಗಳ ಮನೆ ನಿರ್ಮಾಣಕ್ಕೆ ಧನಸಹಾಯ ನೀಡಿದರು. ನೊಂದ ಅನಾರೋಗ್ಯ ಪೀಡಿತರ ಚಿಕಿತ್ಸೆಗೆ ನೆರವು ನೀಡಿದರು. ಬಡ ಮಕ್ಕಳ ಶಿಕ್ಷಣಕ್ಕೆ ನೆರವು, ಶ್ರವಣ ಸಾಧನಾ ವಿತರಣೆ, ಸ್ವಚ್ಚತಾ ಸಾಮಗ್ರಿ ವಿತರಣೆ, ಕಟ್ಟಿಂಗ್ ಮೆಷಿನ್, ಟೈಲರಿಂಗ್ ಮೆಷಿನ್, ಸೇವಾ ಮನೋಭಾವನೆಯ ಸಮಾಜ ಸೇವಾ ಸಂಸ್ಥೆಗಳಿಗೆ ಸಹಾಯಧನ ಹಸ್ತಾಂತರ ಸೇರಿದಂತೆ 50ಕ್ಕೂ ಅಧಿಕ ಸೇವಾ ಕಾರ್ಯಗಳಿಗೆ ಚಾಲನೆ ನೀಡಿ ತನ್ನ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡರು.
ವಿಕಾಸ ಕಚೇರಿಯಲ್ಲಿ ನಡೆದ ಸೇವಾ ಕಾರ್ಯ ವಿತರಣೆಯ ಸರಳ ಕಾರ್ಯಕ್ರಮದಲ್ಲಿ ಶಾಸಕ ವಿ. ಸುನಿಲ್ ಕುಮಾರ್ ಮಾತನಾಡಿ, ನನಗೆ 50 ವರ್ಷ ತುಂಬಿದ ಸಂದರ್ಭದಲ್ಲಿ ಅಶಕ್ತರನ್ನು ಗುರುತಿಸಿ, 50ಕ್ಕೂ ಹೆಚ್ಚು ಜನರಿಗೆ ನಮ್ಮ ಕೈಯಿಂದಾದ ಸಹಾಯ ಮಾಡುವ ಪ್ರಯತ್ನ ನಡೆಸಿದ್ದೇವೆ. ಸಾಮಾಜಿಕ ಕೆಲಸಗಳು ಹಾಗೂ ಸೇವಾ ಕಾರ್ಯಗಳು, ಇನ್ನಿತರ ಸಹಾಯವನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದೇವೆ ಎಂದರು. ಹಳೆಯ ಮನೆಗಳನ್ನು ಸಂಪೂರ್ಣವಾಗಿ ರಿಪೇರಿ ಮಾಡುವ ಹೊಣೆಗಾರಿಕೆಯನ್ನು ವಿಕಾಸ ಸೇವಾ ಸಂಸ್ಥೆಯು ವಹಿಸಿಕೊಂಡಿದೆ. ತರುಣ ಭಾರತ ಸಂಘವು ಉತ್ತಮ ಕಾರ್ಯ ಚಟುವಟಿಕೆಗಳನ್ನು ಮಾಡುತ್ತಾ ಬಂದಿದೆ. ಈ ರೀತಿಯ ಎಲ್ಲಾ ಚಟುವಟಿಕೆಗಳಿಗೆ ನಿಮ್ಮ ನಿರಂತರವಾದ ಸಹಕಾರವಿರಲಿ. ನಮ್ಮ ಕಾರ್ಕಳ ಸ್ವಚ್ಛ ಕಾರ್ಕಳ ಎಂಬ ಪರಿಕಲ್ಪನೆಯನ್ನಿಟ್ಟುಕೊಂಡು ಅಭಿವೃದ್ಧಿಯ ಆಶಯವನ್ನು ಇಟ್ಟುಕೊಂಡು ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿರುವ ನಮ್ಮ ಮೇಲೆ ನಿಮ್ಮೆಲ್ಲರ ಸಹಕಾರವಿರಲಿ ಎಂದರು.
ರವೀಂದ್ರ ಮಡಿವಾಳ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶ ಸಂಭ್ರಮ ಪಡುವ ಈ ಸಮಯದಲ್ಲಿ ಪ್ರತಿ ವರ್ಷ ಇನ್ನೊಂದು ಸಂಭ್ರಮದ ಖುಷಿ ನಮ್ಮ ಕಾರ್ಕಳದ ಜನರಿಗಿದೆ. ಅದು ಶಾಸಕನ ವಿ ಸುನಿಲ್ ಕುಮಾರ್ ರವರ ಹುಟ್ಟು ಹಬ್ಬ. ಶಾಸಕರು ಕಾರ್ಕಳದ ಜನರಿಗೆ ಸಿಕ್ಕಿದ ಒಂದು ಉತ್ತಮ ಕೊಡುಗೆ. ಜನಪ್ರತಿನಿಧಿ ಎಲ್ಲರೂ ಆಗುತ್ತಾರೆ ಆದರೆ ಸುನಿಲ್ ಕುಮಾರ್ ರವರು ಒಬ್ಬ ಪ್ರತಿನಿಧಿ ಆಗಿದ್ದಾರೆ ಅಂದ್ರೆ ಆ ನಾಡು ಭಾಗ್ಯವಂತರ ನಾಡೇ ಆಗಿರುತ್ತದೆ. ಕಾರ್ಕಳವನ್ನು ಬದಲಾವಣೆಯ ದಾರಿಯಲ್ಲಿ ಕೊಂಡೊಯ್ದು, ಅಭಿವೃದ್ಧಿ, ಸಾಮಾಜಿಕ ಕಳಕಳಿಯ ಮುಖಾಂತರ ಹಲವಾರು ಕೊಡುಗೆ ನೀಡಿ ಪ್ರೇರಣಾ ಶಕ್ತಿ ಯಾಗಿ ನಿಂತವರು ನಮ್ಮ ಸುನಿಲ್ ಕುಮಾರ್ ಎಂದರು. ಪ್ರಮುಖರಾದ ಬೋಳ ಶ್ರೀನಿವಾಸ್ ಕಾಮತ್ , ಅತ್ರಿ ಪ್ರಸನ್ನ ಶೆಟ್ಟಿ, ಜಯರಾಮ್ ಸಾಲ್ಯಾನ್, ಮತ್ತಿತರರು ಉಪಸ್ಥಿತರಿದ್ದರು. ರಾಕೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.














