
ಉಡುಪಿ,ಫೆ.24: ಭಾರತ ಸರ್ಕಾರದ ವಾರ್ತಾ ಶಾಖೆ, ಬೆಂಗಳೂರು (ಪಿಐಬಿ) ವತಿಯಿಂದ ಇಂದು ಉಡುಪಿಯಲ್ಲಿ ವಿಕಸಿತ ಭಾರತ ಜಿ ರಾಮ್ ಜಿ ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳ ಕುರಿತು ಆಯೋಜಿಸಿದ್ದ ‘ವಾರ್ತಾಲಾಪ’ ಕಾರ್ಯಾಗಾರವನ್ನು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿ ಮಾತನಾಡಿ, ಅಭಿವೃದ್ಧಿಯ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು. ಅದೇ ಪ್ರಜಾಪ್ರಭುತ್ವದ ಆಶಯವು ಕೂಡ. ಕಳೆದ 3-4 ದಶಕಗಳಲ್ಲಿ ಸಾಮಾಜಿಕ ಅಭಿವೃದ್ಧಿ ದೃಷ್ಟಿಯಿಂದ ಅನೇಕ ಕ್ರಾಂತಿಕಾರಿ ಬದಲಾವಣೆಗಳು ಆಗಿವೆ. ಅದಕ್ಕೆ ಕೇಂದ್ರ, ರಾಜ್ಯ ಸರ್ಕಾರಗಳು, ಜಿಲ್ಲಾ ಮತ್ತು ಗ್ರಾಮ ಆಡಳಿತಗಳ ಪಾತ್ರ ಬಹಳ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಜನಪರ ಯೋಜನೆಗಳ ಕುರಿತು ಮಾತನಾಡಿದ ಅವರು ಪ್ರಸ್ತುತ ವಿಕಸಿತ ಭಾರತ ಜಿ ರಾಮ್ ಜಿ ಯೋಜನೆಯಿಂದ ಭ್ರಷ್ಟಾಚಾರ ತಡೆಗಟ್ಟಲು, ಹೆಚ್ಚಿನ ಪಾರದರ್ಶಕತೆ ಕಾಣಲು ಸಾಧ್ಯವಾಗಲಿದೆ. ಉದ್ಯೋಗದ ದಿನಗಳನ್ನು 100 ರಿಂದ 125 ದಿನಗಳಿಗೆ ಹೆಚ್ಚಿಸುವ ಮೂಲಕ ಗ್ರಾಮೀಣ ಜನರ ಜೀವನೋಪಾಯ ಸುಭದ್ರವಾಗಲಿದೆ. ಆಯುಷ್ಮಾನ ಭಾರತ ಆರೋಗ್ಯ ಕಾರ್ಡ್, ಜನೌಷಧಿ ಕೇಂದ್ರಗಳು ಜನರಿಗೆ ಉತ್ತಮ ಮತ್ತು ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆ ಒದಗಿಸುತ್ತಿವೆ. ಕರಾವಳಿ ಭಾಗದುದ್ದಕ್ಕೂ ಮೀನುಗಾರರ ರಕ್ಷಣೆ, ಅಭ್ಯುದಯಕ್ಕೆ ಮೀಸಲಾದ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಿಂದ 25 ಲಕ್ಷ ಟನ್ ಕಡಲ ಆಹಾರದ ಉತ್ಪಾದನೆಯಾಗುತ್ತಿರುವುದು ವಿಶೇಷ. ಇದರಿಂದ ಮೀನುಗಾರರ ಜೀವನ ಬಹಳ ಸುಗಮವಾಗುತ್ತಿದೆ ಎಂದರು.
ಜನರ ಆರ್ಥಿಕ ಸಬಲೀಕರಣಕ್ಕಾಗಿ ಮುದ್ರಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ, ಜೀವನ ಸುರಕ್ಷಾ ಯೋಜನೆ, ಪ್ರತಿ ಮನೆಗೂ ನೀರು ಪೂರೈಸುವ ಜಲಜೀವನ ಮಿಷನ್, ಹೆಣ್ಣು ಮಕ್ಕಳ ಉತ್ತಮ ಭವಿಷ್ಯ ರೂಪಿಸುವ ಬೇಟಿ ಬಚಾವೋ ಬೇಟಿ ಪಡಾವೋ, ಕುಶಲಕರ್ಮಿಗಳಿಗೆ ಉತ್ತೇಜನ ನೀಡುವ ವಿಶ್ವಕರ್ಮ ಹೀಗೆ ಎಲ್ಲ ವಲಯಗಳಿಗೂ ಕೇಂದ್ರ ಸರ್ಕಾರ ಆದ್ಯತೆ ನೀಡಿ, ಜನಪರ ಯೋಜನೆಗಳನ್ನು ಜಾರಿ ಮಾಡಿದೆ. ಈ ಯೋಜನೆಗಳನ್ನು ಎಲ್ಲರಿಗೂ ತಲುಪಿಸುವಲ್ಲಿ ಒಟ್ಟಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್ ಅವರು ಮಾತನಾಡಿ ಸಮ ಸಮಾಜ ನಿರ್ಮಾಣ ಮಾಡಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಅನೇಕ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಉಡುಪಿ ಜಿಲ್ಲೆ ಉಳಿದ ಜಿಲ್ಲೆಗಳಿಗಿಂತ ಮುಂದಿದೆ. ಕರಾವಳಿ ಭಾಗಕ್ಕೆ ಅನ್ವಯವಾಗುವ ಕೇಂದ್ರ ಸರ್ಕಾರದ ಸಾಗರಮಾಲಾ, ಪ್ರಶಾದ್ ಯೋಜನೆಗಳ ಸಮರ್ಪಕ ಅನುಷ್ಠಾನವಾಗಬೇಕು. ಅಭಿವೃದ್ಧಿಗಾಗಿ ಸರ್ಕಾರದ ಅನುದಾನದ ಜೊತೆಗೆ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆಯ (ಸಿಎಸ್ಆರ್) ನಿಧಿಯನ್ನು ಬಳಸಿಕೊಂಡು ಪ್ರಗತಿಯ ವೇಗ ಹೆಚ್ಚಿಸಬೇಕು ಎಂದು ಹೇಳಿದರು.
ಕಾರ್ಯಾಗಾರದ ಅಧಿವೇಶನದಲ್ಲಿ ವಿಕಸಿತ ಭಾರತ ಜಿ ರಾಮ್ ಜಿ ಯೋಜನೆ ಕುರಿತು ಎಡಿಪಿಸಿ ಸಹಾಯಕ ಜಿಲ್ಲಾ ಕಾರ್ಯಕ್ರಮ ಸಂಯೋಜಕ ವಿಜಯ ಶ್ಯಾ ಮ್ ಅವರು ಮಾತನಾಡಿ, ಈ ಹೊಸ ಯೋಜನೆಯಲ್ಲಿ ಜನರ ಬೇಡಿಕೆಗೆ ಅನುಗುಣವಾಗಿ ಗ್ರಾಮ ಪಂಚಾಯಿತಿಗಳು ಕಾಮಗಾರಿಗಳನ್ನು ಕೈಗೊಳ್ಳಲಿವೆ. ಕೇಂದ್ರ ಹಾಗೂ ರಾಜ್ಯದ ನಡುವೆ 60:40 ಪಾಲುದಾರಿಕೆ ಇರಲಿದ್ದು, ಈ ಯೋಜನೆಯಿಂದ ಆರ್ಥಿಕ ಸ್ಥಿರತೆ, ಗ್ರಾಮೀಣ ಜೀವನ ಸುಧಾರಣೆ ಆಗಲಿದೆ. ಮುಖ್ಯವಾಗಿ ವಲಸೆ ತಡೆಗಟ್ಟುವುದು, ಜಲಭದ್ರತೆ, ಗ್ರಾಮೀಣ ಮೂಲಸೌಕರ್ಯ, ಸಾರ್ವಜನಿಕ ಆಸ್ತಿ ಸೃಜನೆ, ಕೆಲಸದ ವಿಕೇಂದ್ರೀಕರಣಕ್ಕೆ ಒತ್ತು ನೀಡಲಾಗಿದೆ. ಬಯೋಮೆಟ್ರಿಕ್ ಬಳಕೆ, ಎಐ ಮೇಲ್ವಿಚಾರಣೆ ಮೂಲಕ ಹೆಚ್ಚಿನ ಪಾರದರ್ಶಕತೆ, ಹೊಣೆಗಾರಿಕೆಯನ್ನು ಕಾಣಬಹುದು ಎಂದು ಮಾಹಿತಿ ನೀಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಯೋಜನೆಗಳ ಅನುಷ್ಠಾನದ ಕುರಿತು ಇಲಾಖೆಯ ಜಿಲ್ಲಾ ಕಾರ್ಯಕ್ರಮ ಅಭಿವೃದ್ಧಿ ಅಧಿಕಾರಿ ಡಾ. ಪ್ರಶಾಂತ ಭಟ್, ನೂತನ ಕಾರ್ಮಿಕ ಕಾನೂನುಗಳ ಕುರಿತು ಮಂಗಳೂರು ಇಎಸ್ಐಸಿ ಉಪ ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕ ವಿಜಯ್ ಆನಂದ್ ಎ.ಟಿ., ಪಿಎಂ-ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ ಕುರಿತು ಮೆಸ್ಕಾಂನ ಅಧೀಕ್ಷಕ ಅಭಿಯಂತರರಾದ ಶ್ರೀ ನರಸಿಂಹ, ಹಣಕಾಸು ಸುರಕ್ಷತೆ ಮತ್ತು ಆರ್ಥಿಕ ಸಬಲೀಕರಣದ ಕುರಿತು ಉಡುಪಿ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಹರೀಶ್ ಜಿ. ಅವರು ಮಾಹಿತಿ ಹಂಚಿಕೊಂಡರು.
ಈ ಸಂದರ್ಭದಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಬಿ., ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಸುಬ್ರಮಣ್ಯ ಜಿ. ಕುರ್ಯ ಮತ್ತಿತರರು ಉಪಸ್ಥಿತರಿದ್ದರು.


.
.
.
.
.
.
.
.
.
.
