ಬೆಂಗಳೂರು: ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿಯ ಹಾಲಿ ಸಂಸದ ಶ್ರೀನಿವಾಸ ಪ್ರಸಾದ್ (76) ಅವರು ರಾತ್ರಿ 1.20ಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಶ್ರೀನಿವಾಸ ಪ್ರಸಾದ್ ಅವರು ಮೂರು ದಿನಗಳ ಹಿಂದೆ ಬೆಂಗಳೂರಿನ ಓಲ್ಡ್ ಏರ್‌ಪೋರ್ಟ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.ಆದರೆ ಸೋಮವಾರ ಮಧ್ಯರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇವರಿಗೆ ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳಿದ್ದಾರೆ. ಪತ್ನಿ ಭಾಗ್ಯಲಕ್ಷ್ಮಿ ಪ್ರಸಾದ್, ಪುತ್ರಿಯರಾದ ಪ್ರತಿಮಾ ಪ್ರಸಾದ್, ಪೂರ್ಣಿಮಾ ಪ್ರಸಾದ್, ಪೂನಂ ಪ್ರಸಾದ್ ಇವರನ್ನು ಅಗಲಿದ್ದಾರೆ.
ಇತ್ತೀಚಿನ ದಿನಗಳಲ್ಲಿ ತಂದೆಯ ಆರೋಗ್ಯ ಗಂಭೀರವಾಗಿತ್ತು. ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದೆವು. ವೈದ್ಯರು ಅವರನ್ನು ಗುಣಪಡಿಸಲು ಶ್ರಮ ಪಟ್ಟಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಮ್ಮನ್ನು ಅಗಲಿದ್ದಾರೆ. ಮೈಸೂರಿನ ಜಯಲಕ್ಷ್ಮೀಪುರಂ ನಿವಾಸದಲ್ಲಿ ವಿಧಿವಿಧಾನ ಪೂರೈಸಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಶ್ರೀನಿವಾಸ ಪ್ರಸಾದ್ ಪುತ್ರಿ ಪೂರ್ಣಿಮಾ ಪ್ರಸಾದ್ ಹೇಳಿದ್ದಾರೆ.
ಶ್ರೀನಿವಾಸ್ ಪ್ರಸಾದ್ ಈ ಚುನಾವಣೆಯಲ್ಲಿ ಬಿಜೆಪಿ ಜತೆ ಅಂತರ ಕಾಯ್ದುಕೊಂಡು ಸಿಎಂ ಸಿದ್ದರಾಮಯ್ಯ ಜತೆ ಗುರುತಿಸಿಕೊಂಡಿದ್ದರು.