Share this news

ಬೆಂಗಳೂರು: ತೀವ್ರ ಕುತೂಹಲ ಮೂಡಿಸಿದ್ದ ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆ ಎನ್​ಡಿಎ ಅಭ್ಯರ್ಥಿ ಕೊನೆಗೂ ಘೋಷಣೆಯಾಗಿದೆ. ನಾಮಪತ್ರ ಸಲ್ಲಿಕೆಗೆ ನಾಳೆ ಒಂದು ದಿನ ಬಾಕಿ ಇರುವಾಗಲೇ ಬಿಜೆಪಿ-ಜೆಡಿಎಸ್​ ಮೈತ್ರಿ ಅಭ್ಯರ್ಥಿ ಹೆಸರು ಪ್ರಕಟವಾಗಿದ್ದು, ಅಳೆದು ತೂಗಿ ಕೊನೆ ಕ್ಷಣದಲ್ಲಿ ನಿಖಿಲ್​ ಕುಮಾರಸ್ವಾಮಿ ಅವರಿಗೆ ಮಣೆಹಾಕಲಾಗಿದೆ. ಬಿಎಸ್​ ಯಡಿಯೂರಪ್ಪ ನಿವಾಸದಲ್ಲಿಂದು ನಡೆದ ಜೆಡಿಎಸ್​​-ಬಿಜೆಪಿ ನಾಯಕರ ಸಮನ್ವಯ ಸಭೆ ಬಳಿಕ ನಿಖಿಲ್​ ಹೆಸರು ಘೋಷಣೆ ಮಾಡಲಾಯಿತು. ಸ್ವತಃ ಯಡಿಯೂರಪ್ಪ ಅವರೇ ಚನ್ನಪಟ್ಟಣ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ನಿಖಿಲ್ ಸ್ಪರ್ಧಿಸುತ್ತಾರೆ ಎಂದು ಘೋಷಿಸಿದರು.

ಕಳೆದ ಹಲವು ದಿನಗಳಿಂದ ಗೊಂದಲವಾಗಿ ಮಾರ್ಪಟ್ಟಿದ್ದ ಅಭ್ಯರ್ಥಿ ಆಯ್ಕೆ ಸಂಬಂಧ, ಇಂದು(ಅಕ್ಟೋಬರ್ 24)​ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ನಡೆದಿದ್ದು, ಈ ಸಭೆಯಲ್ಲಿ ನಿಖಿಲ್ ಸ್ಪರ್ಧೆಗೆ ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ.  ಬಳಿಕ ಯಡಿಯೂರಪ್ಪ ನಿವಾಸದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ನಾಯಕರ ಸಮನ್ವಯ ಸಭೆ ನಡೆಸಿ ನಂತರ ನಿಖಿಲ್​ ಕುಮಾರಸ್ವಾಮಿ ಎನ್​ಡಿಎ ಅಭ್ಯರ್ಥಿ ಎಂದು ಘೋಷಣೆ ಮಾಡಲಾಯಿತು. ಇದೀಗ ಚನ್ನಪಟ್ಟಣ ಎನ್​ಡಿಎ ಅಭ್ಯರ್ಥಿ ಆಯ್ಕೆ ಗೊಂದಲಕ್ಕೆ ತೆರೆ ಬಿದ್ದಿದೆ.

ಉಪ ಚುನಾವಣೆ ನಡೆಯಲಿರುವ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಪೈಕಿ ಶಿಗ್ಗಾಂವಿ ಹಾಗೂ ಸಂಡೂರು ಕ್ಷೇತ್ರಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಹೆಸರನ್ನು ಈಗಾಗಲೇ ಘೋಷಿಸಿದ್ದು, ಎನ್‌ಡಿಎ ಮೈತ್ರಿಕೂಟದ ಭಾಗವಾಗಿದ್ದ ಜೆಡಿಎಸ್‌ಗೆ ಚನ್ನಪಟ್ಟಣವನ್ನು ಬಿಟ್ಟುಕೊಟ್ಟಿತ್ತು.

ಈಗಾಗಲೇ ಲೋಕಸಭಾ, ವಿಧಾನಸಭಾ ಚುನಾವಣೆಯಲ್ಲಿ ಸೋಲುಕಂಡಿರುವ ನಿಖಿಲ್​ ಕುಮಾರಸ್ವಾಮಿ ಅವರನ್ನು ಚನ್ನಪಟ್ಟಣ ಉಪಚುನಾವಣೆ ಕಣಕ್ಕಿಳಿಸಲಾಗಿದೆ. ಈ ಚುನಾವಣೆಯಲ್ಲಿ ನಿಖಿಲ್ ಭವಿಷ್ಯ ಏನಾಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

 

 

Leave a Reply

Your email address will not be published. Required fields are marked *