
ನವದೆಹಲಿ,ಅ.24 ; ಅಪ್ರಾಪ್ತ ವಯಸ್ಕರು 18 ವರ್ಷ ಪೂರೈಸಿದ ನಂತರ, ಅವರ ಪೋಷಕರು ಅಥವಾ ಪಾಲಕರು ಮಾಡಿದ ಯಾವುದೇ ಆಸ್ತಿ ಮಾರಾಟ ಅಥವಾ ವರ್ಗಾವಣೆಯನ್ನು, ನಾಯಾಲಯದಲ್ಲಿ ಮೊಕದ್ದಮೆ ಹೂಡದೆ ಪ್ರಶ್ನಿಸಬಹುದು ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಆಸ್ತಿ ಮಾರಾಟ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಆಸ್ತಿ ವರ್ಗಾವಣೆಗಳನ್ನು ಸ್ಪಷ್ಟ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ, ಅಂದರೆ ಆಸ್ತಿಯನ್ನು ತಾವೇ ಮಾರಾಟ ಮಾಡುವ ಮೂಲಕ ಅಥವಾ ವರ್ಗಾಯಿಸುವ ಮೂಲಕ, ರದ್ದುಗೊಳಿಸಬಹುದು ಎಂದು ಸರ್ವೋಚ್ಛ ನ್ಯಾಯಾಲಯ ಸ್ಪಷ್ಟಪಡಿಸಿದ್ದು, ಆಸ್ತಿ ಮಾರಾಟ ಅಥವಾ ವರ್ಗಾವಣೆ ಕುರಿತ ಭವಿಷ್ಯದ ವ್ಯಾಜ್ಯಗಳಿಗೆ ಈ ತೀರ್ಪು ಮಾನದಂಡವಾಗಲಿದೆ.
ಕರ್ನಾಟಕದ ಶಾಮನೂರು ಗ್ರಾಮದ ಕೆ.ಎಸ್. ಶಿವಪ್ಪ ಮತ್ತು ಕೆ. ನೀಲಮ್ಮ ನಡುವಿನ ಆಸ್ತಿ ಮಾರಾಟ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪಂಕಜ್ ಮಿಥಾಲ್ ಮತ್ತು ಪ್ರಸನ್ನ ಬಿ ವರಾಳೆ ನೇತೃತ್ವದ ದ್ವಿಸದಸ್ಯ ಪೀಠ, ಅಪ್ರಾಪ್ತ ವಯಸ್ಕರು 18 ವರ್ಷ ಪೂರೈಸಿದ ನಂತರ ಅವರ ಪೋಷಕರು ಮತ್ತು ಪಾಲಕರು ಮಾಡಿದ ಯಾವುದೇ ಆಸ್ತಿ ಮಾರಾಟ ಮತ್ತು ವರ್ಗಾವಣೆಯನ್ನು ರದ್ದಗೊಳಿಸಬಹುದು ಎಂದು ತೀರ್ಪು ನೀಡಿತು.
ಮೂಲ ಮಾರಾಟವನ್ನು ರದ್ದುಗೊಳಿಸಲು ಅಪ್ರಾಪ್ತ ವಯಸ್ಕರು ಮೊಕದ್ದಮೆ ಹೂಡಬೇಕೇ ಅಥವಾ ಬೇಡವೇ ಎಂಬುದರ ಬಗ್ಗೆ, ಈ ಪ್ರಕರಣದ ವಿಚಾರಣೆ ನಡೆಸಿದ ಕೆಳ ಹಂತದ ನ್ಯಾಯಾಲಯಗಳಲ್ಲಿ ಭಿನ್ನಾಭಿಪ್ರಾಯಗಳಿದ್ದವು. ಇದಕ್ಕೆ ಸ್ಪಷ್ಟನೆ ನೀಡಿರುವ ಸುಪ್ರೀಂಕೋರ್ಟ್, ಔಪಚಾರಿಕ ಮೊಕದ್ದಮೆಯ ಅಗತ್ಯವಿಲ್ಲ ಎಂದು ಹೇಳಿದೆ. ಪಾಲಕರ ಮಾರಾಟವನ್ನು ಪ್ರಾಪ್ತ ವಯಸ್ಕರು ಸ್ಪಷ್ಟವಾಗಿ ಪರಿವರ್ತಿಸುವ ಮೂಲಕ, ಅಂದರೆ ಆಸ್ತಿಯನ್ನು ತಾವೇ ಮಾರಾಟ ಮಾಡುವ ಮೂಲಕ ತಿರಸ್ಕರಿಸಬಹುದು.
ಅಪ್ರಾಪ್ತ ವಯಸ್ಕನ ಪಾಲಕರು ಮಾಡಿದ ಅನೂರ್ಜಿತ ವಹಿವಾಟನ್ನು ಪ್ರಾಪ್ತ ವಯಸ್ಸಿಗೆ ಬಂದ ಬಳಿಕ, ವ್ಯಕ್ತಿಯೊಬ್ಬ ಮೊಕದ್ದಮೆ ಹೂಡುವ ಮೂಲಕ ಅಥವಾ ಅದನ್ನು ತನ್ನ ಸ್ಪಷ್ಟ ತಿಳುವಳಿಕೆಗೆ ಅನುಗುಣವಾಗಿ ನಿರಾಕರಿಸುವ ಮೂಲಕ ತಿರಸ್ಕರಿಸಬಹುದು ಎಂದು ನ್ಯಾಯಮೂರ್ತಿ ಪಂಕಜ್ ಮಿಥಾಲ್ ತಮ್ಮ ತೀರ್ಪಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.






